ಕಲಬುರಗಿ: ಆಧುನಿಕತೆ ಭರಾಟೆಯಲ್ಲಿ ಬಂಜಾರ ಸಮುದಾಯದವರು ತಮ್ಮದೆಯಾದ ವೇಷ-ಭೂಷಣ, ಕಲೆ, ಭಾಷೆ, ಸಂಸ್ಕೃತಿ, ಪರಂಪರೆಯನ್ನು ಇಂದಿಗೂ ಕೂಡಾ ಸಂರಕ್ಷಿಸಿಕೊಂಡು ಬಂದವರು. ಯಾವುದೆ ಹಬ್ಬ, ಉತ್ಸವ, ಆಚರಣೆಗಳನ್ನು ಶೃದ್ಧೆ, ಭಕ್ತಿಯಿಂದ ಮಾಡುವ ಮೂಲಕ ಮುಂದಿನ ಪೀಳಿಗೆಗೆ ವರ್ಗಾಯಿಸುವ ಬಂಜಾರರು ಭಾರತೀಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಅಪಾರವಾದ ಕೊಡುಗೆ ನೀಡುತ್ತಿದ್ದಾರೆ ಎಂದು ಬಳಿರಾಮ ಮಹಾರಾಜರು ಅಭಿಮತಪಟ್ಟರು.
ಅಫಜಲಪುರ ತಾಲೂಕಿನ ಗೊಬ್ಬೂರ ವಾಡಿಯ ತಾಂಡಾದ ಸಂತ ಸೇವಾಲಾಲ್ ಆಶ್ರಮದಲ್ಲಿ ದೀಪಾವಳಿ ಪಾಡ್ಯಮಿಯಂದು ಬುಧವಾರ ಜರುಗಿದ ‘ಬಂಜಾರಾ ದೀಪಾವಳಿ ಸಂಭ್ರಮ’ದಲ್ಲಿ ಬಾಲಕಿಯರು, ಮಹಿಳೆಯರಿಂದ ಜರುಗಿದ ಗಾಯನ, ನೃತ್ಯ, ಹಾಗೂ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ಬಂಜಾರಾ ನಾಯಕರು, ಪರಂಪರೆಯ ವಾರಸುದಾರರಿಗೆ ಏರ್ಪಡಿಸಿದ್ದ ಗೌರವ ಸತ್ಕಾರ ಕಾರ್ಯಕ್ರಮ ಉದ್ಘಾಟಿಸಿ ಆರ್ಶೀವಚನ ನೀಡಿದರು.
ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ ಹಾಗೂ ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಮಾತನಾಡಿ, ಬಂಜಾರರು ದೇಶದ ಸಂಸ್ಕೃತಿಯ ರಾಯಭಾರಿಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಚೀನ ಕಲೆ, ಸಂಸ್ಕೃತಿ, ಪರಂಪರೆ ಅಪರೂಪವಾಗಿದೆ. ಆಧುನಿಕತೆಯ ಕಲಾದಲ್ಲಿಯೂ ತಮ್ಮ ಸಂಸ್ಕೃತಿಯನ್ನು ಇಂದಿಗೂ ಕೂಡಾ ಉಳಿಸಿಕೊಂಡು ಬರುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂತಹ ಅಪರೂಪದ ಪರಂಪರೆಯನ್ನು ಎಲ್ಲರಲ್ಲಿ ಜನ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಬಳಗವು ಕಳೆದ 8 ವರ್ಷಗಳಿಂದ ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜ ಸೇವಕ, ಬಂಜಾರ ಚಿಂತಕ ರವಿ ನಾಯಕ ಲಂಬಾಣಿ ಸಮುದಾಯದ ಜನರು ದೀಪಾವಳಿಯನ್ನು ‘ದವಾಳಿ’ ಎಂದು ಮೂರು ದಿವಸಗಳ ಕಾಲ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ದೇವರಿಗೆ ಹರಕೆ ತೀರಿಸುವ ‘ಕಾಳಿಮಾಸ್’, ಲಕ್ಷ್ಮಿ ಪೂಜೆ ಹಿರಿಯರಿಗೆ ಗೌರವ ಸಲ್ಲಿಸಲಾಗುತ್ತದೆ. ಹೆಣ್ಣುಮಕ್ಕಳು ದೀಪ ಹಚ್ಚಿಕೊಂಡು ಪ್ರತಿ ಮನೆಗೆ ತೆರಳಿ ಬೆಳಗುವ ಮೇರಾ ಹೊಲಕ್ಕೆ ಹೋಗಿ ಬಗೆ-ಬಗೆಯ ಹೂವುಗಳನ್ನು ತಂದು ಸಗಣಿಯ ಮೇಲ್ಬಾಗದಲ್ಲಿ ಇಡಲಾಗುತ್ತದೆ. ಆಗಮಿಸಿದ ಅತಿಥಿಗಳಿಗೆ ಸತ್ಕರಿಸುವುದು, ಲಂಬಾಣಿ ಗೀತಗಾಯನ, ನೃತ್ಯ ಮಾಡುವುದು, ಕಳಸದ ಮೆರವಣಿಗೆ ಮಾಡಲಾಗುತ್ತದೆ ಎಂದು ಮೂರು ದಿನಗಳ ಕಾಲ ಆಚರಿಸುವ ವಿವಿಧ ಪದ್ಧತಿಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಬಂಜಾರ ಪರಂಪರೆಯ ಹಿರಿಯರಾದ ಶೀತಾಬಾಯಿ, ಗುರುಬಾಯಿ, ಕಮಲಾಬಾಯಿ, ರಾಮಚಂದ್ರ ಜಾಧವ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.
ಕಸಾಪ ಕಲಬುರಗಿ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಡಾ.ಗುರುನಾಥ ಜಾಧವ, ಸಂತೋಷ ಜಾಧವ, ಮಂಜುನಾಥ ಪವಾರ, ತಾರಾಬಾಯಿ, ಸಾಣೇಬಾಯಿ, ಜೈನಾಬಾಯಿ, ಶೀಲಾಬಾಯಿ, ಪ್ರತಿಭಾ, ರುಕ್ಷಣಿಬಾಯಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.