ಹುಬ್ಬಳ್ಳಿ: ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆ ಪ್ರಕರಣ ಸಂಬಂಧ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ನವಜಾತ ಗಂಡು ಶಿಶುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆಯಾದ ಹಿನ್ನಲೆ ಡಾ. ರಾಜಶಂಕರ್ ನೇತೃತ್ವದ ವೈದ್ಯರ ತಂಡ ಅಕ್ಟೋಬರ್ 8ರಂದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿತ್ತು. ಬಳಿಕ ಮಗುವನ್ನು ತುರ್ತು ನಿಘಾ ಘಟಕದಲ್ಲಿಡಲಾಗಿತ್ತು. ಈಗ ಮಗು ಸಂಪೂರ್ಣವಾಗಿ ಗುಣಮುಖವಾಗಿರುವ ಹಿನ್ನೆಲೆಯಲ್ಲಿ ತಾಯಿ, ಮಗುವನ್ನು ಮನೆಗೆ ಕಳುಹಿಸಿಕೊಡಲಾಗಿದೆ.
ಸೆಪ್ಟೆಂಬರ್ 23ರಂದು ಹೆರಿಗೆಗೆಂದು ದಾಖಲಾಗಿದ್ದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಹಿಳೆಯೊಬ್ಬರು ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಗಂಡು ಮಗುವನ್ನು ಪರೀಕ್ಷಿಸುವಾಗ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ ಕಂಡುಬಂದಿತ್ತು. ಇನ್ನು ಹೆರಿಗೆಗೆ ಮುನ್ನವೇ ಮಗುವಿನ ಹೊಟ್ಟೆಯಲ್ಲಿ ಭ್ರೂಣದ ರೀತಿ ಏನೋ ಇದೆ ಎಂದು ಕಿಮ್ಸ್ನ ಡಾ. ರೂಪಾಲಿ ಅವರು ಅಲ್ಟ್ರಾಸೌಂಡ್ ಪರೀಕ್ಷೆ ವೇಳೆ ಗುರುತಿಸಿದ್ದರು. ಆದರೆ ಹೆರಿಗೆಗೆ ಅದು ಯಾವುದೆ ತೊಂದರೆ ಮಾಡದ ಹಿನ್ನಲೆ ವೈದ್ಯರು ಮಹಿಳೆಗೆ ಸಹಜ ಹೆರಿಗೆ ಮಾಡಿಸಿದ್ದರು.
ಆ ಬಳಿಕ ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು.ಕಿಮ್ಸ್ ನ ಹಿರಿಯ ವೈದ್ಯ, ಮಕ್ಕಳ ಶಸ್ತ್ರಚಿಕಿತ್ಸಕ ಡಾ.ರಾಜಶಂಕರ್ ನೇತೃತ್ವದಲ್ಲಿ ಆಪರೇಷನ್ ನಡೆದಿತ್ತು.
ಮೊದಲು ಮಗುವಿಗೆ ಲ್ಯಾಪ್ರೋಸ್ಕೋಪಿ ಮಾಡಿ ಹೊಟ್ಟೆಯ ಯಾವ ಭಾಗದಲ್ಲಿ ಭ್ರೂಣ ಇದೆ ಅನ್ನೋದನ್ನು ಪತ್ತೆ ಮಾಡಿದ್ದ ವೈದ್ಯರ ತಂಡ, ಅನಂತರ ಅನಸ್ತೇಶಿಯಾ ಕೊಟ್ಟು ಹೊಟ್ಟೆಯ ಭಾಗದಲ್ಲಿ ಸಣ್ಣ ರಂಧ್ರ ಮಾಡಿ ಶಸ್ತ್ರಚಿಕಿತ್ಸೆ ನಡೆಸಿತ್ತು. ಮಗುವಿನ ಹೊಟ್ಟೆಯಲ್ಲಿದ್ದ ಎಂಟು ಸೆಂಟಿಮೀಟರ್ ಗಾತ್ರದ ಭ್ರೂಣವನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ, ಭ್ರೂಣಕ್ಕೆ ಮೆದುಳು ಮತ್ತು ಹೃದಯ ಇರಲಿಲ್ಲ. ಬೆನ್ನುಮೂಳೆ ಹಾಗೂ ಸಣ್ಣ ಕೈಕಾಲು ಇರೋದು ಪತ್ತೆಯಾಗಿತ್ತು. Fetus in fetu ಎಂದು ಕರೆಯಲ್ಪಡುವ ಈ ಕೇಸ್ ಜಗತ್ತಿನಲ್ಲಿಯೇ ಅಪರೂಪವಾಗಿರುವ ಕಾರಣ, ಭ್ರೂಣದ ಗಡ್ಡೆಯನ್ನು ಪೆಥಾಲಜಿ ವಿಭಾಗದಲ್ಲಿ ಸಂಗ್ರಹಿಸಿಡಲು ಕಿಮ್ಸ್ ಮುಂದಾಗಿದೆ. ಆ ಮೂಲಕ ಭವಿಷ್ಯದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅನಕೂಲ ಕಲ್ಪಿಸಲು ತೀರ್ಮಾನಿಸಿದೆ.