ಆರ್‌ಎಸ್‌ಎಸ್‌ Vs ಸರ್ಕಾರ: ನ.2 ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಒಪ್ಪಿದ ಲಾಯರ್‌ | ಹೈಕೋರ್ಟ್‌ನಲ್ಲಿ ಏನಾಯಿತು ?

ರಾಜ್ಯ

ಕಲಬುರಗಿ: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ವಿಚಾರ ಈಗ ಹೈಕೋರ್ಟ್‌ ಮೆಟ್ಟಿಲೇರಿದೆ. ಆರ್‌ಎಸ್‌ಎಸ್‌ ವಾದವನ್ನು ಕೋರ್ಟ್‌ ಪುರಸ್ಕರಿಸಿದರೆ ನ.2 ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಯುವ ಸಾಧ್ಯತೆಯಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್‌ ಖರ್ಗೆ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಇಂದು ಆರ್‌ಎಸ್‌ಎಸ್‌ ಪಥಸಂಚಲನ ನಡೆಸಲು ಮುಂದಾಗಿತ್ತು. ಆದರೆ ತಾಲೂಕು ಆಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಪುರಸ್ಕರಿಸಿ ವಿಚಾರಣೆ ನಡೆಸಿದ ಕೋರ್ಟ್‌ ಇಂದು ಯಾವುದೆ ಆದೇಶ ಪ್ರಕಟಿಸದೆ ಮುಂದಿನ ವಿಚಾರಣೆ ಅ.24ಕ್ಕೆ ಮುಂದೂಡಿದೆ.

ವಿಚಾರಣೆ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಪರ ವಕೀಲರು ನ.2 ರಂದು ಪಥಸಂಚಲನ ನಡೆಸಲು ಅನುಮತಿ ನೀಡುವಂತೆ ಕೇಳಿದ್ದಾರೆ.

ವಿಚಾರಣೆಯಲ್ಲಿ ಏನಾಯ್ತು ?
ಅರ್ಜಿದಾರ ಅಶೋಕ್‌ ಪಾಟೀಲ್‌ ಪರವಾಗಿ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ವಾದಿಸಿದರು. ಈ ವೇಳೆ ಆರಂಭದಲ್ಲಿ ಪೀಠ ಪಥಸಂಚಲನಕ್ಕೆ ಅನುಮತಿ ಕೋರಿ ಯಾವ ಪ್ರಾಧಿಕಾರಕ್ಕೆ ಅನುಮತಿ ಕೇಳಬೇಕು ? ಯಾವ ಕಾನೂನಿನ ಅಡಿ ಅನುಮತಿ ಕೋರಬೇಕು ಎಂಬ ವಿಚಾರದ ಬಗ್ಗೆ ಮಾತ್ರ ವಾದಿಸಿ ಎಂದು ಸೂಚಿಸಿತು.

ಇದಕ್ಕೆ ಅರುಣ್‌ ಶಾಮ್‌ ಅ.17ಕ್ಕೆ ಚಿತ್ತಾಪುರದ ಕಾರ್ಯಕಾರಿ ಮ್ಯಾಜಿಸ್ಟ್ರೇಟ್‌ಗೆ ಅನುಮತಿ ಕೋರಲಾಗಿತ್ತು. ಆದರೆ ಅ.18 ರಂದು ಈ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ಪೀಠದ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಒಂದು ಗುಂಪು ಪಂಥಸಂಚಲನ ನಡೆಸಲು ಅವಕಾಶವಿದೆಯೇ ? ಅದು ಪ್ರತಿಭಟನೆಯೇ ಆಗಿರಬೇಕಿಂದಿಲ್ಲ. ಅದು ಮೌನ ಪ್ರತಿಭಟನೆಯಾಗಿರಬಹುದು ? ಜನರಲ್ಲಿ ಜಾಗೃತಿ ಮೂಡಿಸಲು ಇಚ್ಛಿಸಬಹುದು ? ಇದಕ್ಕೆ ಅನುಮತಿ ಬೇಕೆ ? ಹಾಗಾದರೆ ಯಾರಿಂದ ಅನುಮತಿ ಪಡೆಯಬೇಕು ? ಯಾವ ಕಾನೂನು ಜಾರಿಯಲ್ಲಿದೆ. ಯಾವ ಕಾನೂನಿನ ನಿಬಂಧನೆಗೆ ನಾವು ಒಳಪಟ್ಟಿದ್ದೆವೆ. ಯಾರಿಗೆ ಅನುಮತಿ ಕೇಳಬೇಕು ಎಂಬುದು ಗೊತ್ತಾಗಬೇಕು. ಇಲ್ಲವಾದಲ್ಲಿ ನಾವು ನಿಯಮವಿಲ್ಲದ ಆಡಳಿತಕ್ಕೆ ಒಳಪಡುತ್ತೆವೆ ಎಂದು ಹೇಳಿತು.

ಇದಕ್ಕೆ ಅರುಣ್‌ ಶ್ಯಾಮ್‌ ಅವರು ಪಥಸಂಚನವನ್ನು ರದ್ದುಪಡಿಸುವುದು ಅವರ ಉದ್ದೇಶವಾಗಿತ್ತು. ಹೀಗಾಗಿ ಅವರು ಅನುಮತಿ ನಿರಾಕರಿಸಿದ್ದಾರೆ ಎಂದು ಉತ್ತರಿಸಿದರು.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ವಾದಿಸಿ, ಬೇರೊಂದು ಸಂಘಟನೆ ಇಂದು ಪಥಸಂಚಲಕ್ಕೆ ಅನುಮತಿ ಕೋರಿದೆ. ಹೀಗಾಗಿ ತಾಲೂಕು ಆಡಳಿತ ಯಾವುದೆ ಸಂಘಟನೆಗೆ ಪಥಸಂಚಲನ ನಡೆಸಲು ಅನುಮತಿ ನೀಡಿಲ್ಲ ಎಂದು ತಿಳಿಸಿದರು.

ಇದಕ್ಕೆ ಪೀಠ ಎರಡೂ ಸಂಘಟನೆಗಳಿಗೆ ಬೇರೆ ಬೇರೆ ದಿನ ಅನುಮತಿ ನೀಡಿ ಎಂದಾಗ ಅರುಣ್‌ ಶ್ಯಾಮ್‌ ಇದು ಸಾಧ್ಯವಿಲ್ಲ. ಬೇರೆ ಸ್ಥಳ ನೀಡಬಹುದು ಎಂದು ಮನವಿ ಮಾಡಿದರು. ಕೊನೆಗೆ ನವೆಂಬರ್‌ 2 ರಂದು ಆರ್‌ಎಸ್‌ಎಸ್‌ ಪಥಸಂಚಲನ ನಡೆಸಲು ಅನುಮತಿಸಿದರೆ ಉತ್ತಮ. ಅಷ್ಟೇ ಅಲ್ಲದೆ ರಾಜ್ಯದ್ಯಂತ ಇದುವರೆಗೆ 250 ಕಡೆ ಪಥಸಂಚಲನ ನಡೆಸಲಾಗಿದೆ. ಎಲ್ಲಿಯೂ ಸಮಸ್ಯೆಯಾಗಿಲ್ಲ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲಾಗುವುದು ಎಂದು ಅರುಣ್‌ ಶ್ಯಾಮ್‌ ಮುಚ್ಚಳಿಕೆ ನೀಡಿದರು.

ಕೊನೆಗೆ ಕೋರ್ಟ್‌ ಯಾವ ರಸ್ತೆ ಮಾರ್ಗ ಪಥಸಂಚಲನ ನಡೆಯಲಿದೆ ? ಎಷ್ಟು ಜನ ಭಾಗವಹಿಸುತ್ತಾರೆ ಎಂಬುದನ್ನು ಅರ್ಜಿದಾರರು ಸರ್ಕಾರಕ್ಕೆ ಮಾಹಿತಿ ನೀಡಬೇಕು. ಹೊಸದಾಗಿ ಅರ್ಜಿ ಸಲ್ಲಿಸಿ ಪಥ ಸಂಚಲನದ ಮಾಹಿತಿ, ದಿನಾಂಕ ಎಲ್ಲಾ ವಿವರಗಳನ್ನು ಒಳಗೊಂಡ ಮನವಿಯನ್ನು ಅರ್ಜಿದಾರರು ಜಿಲ್ಲಾಧಿಕಾರಿಗೆ ನೀಡಬೇಕು. ಇದರ ಪ್ರತಿಯನ್ನು ಅರ್ಜಿದಾರರು ತಹಸೀಲ್ದಾರ್‌, ಸ್ಥಳೀಯ ಪೊಲೀಸರಿಗೆ ನೀಡಬೇಕು ಎಂದು ಸೂಚಿಸಿತು.

ಎಲ್ಲಾ ಮಾಹಿತಿ ಪರಿಗಣಿಸಿ ಸರ್ಕಾರ ವರದಿ ಸಲ್ಲಿಸಬೇಕು. ಇಂದು ಅರ್ಜಿಗೆ ಸಂಬಂಧಿಸಿದಂತೆ ಮೆರಿಟ್‌ ಮೇಲೆ ಯಾವುದೆ ಆದೇಶ ನೀಡುವುದಿಲ್ಲ. ಸರ್ಕಾರದ ವರದಿ ಆಧರಿಸಿ ಪ್ರಕರಣ ಪರಿಗಣಿಸಲಾಗುವುದು ಎಂದು ಸೂಚಿಸಿದ ನ್ಯಾಯಾಲಯ ಅ. 24ರ ಮಧ್ಯಾಹ್ನ 3:30 ವಿಚಾರಣೆಯನ್ನು ಮುಂದೂಡಿತು.

Leave a Reply

Your email address will not be published. Required fields are marked *