ಚಿತ್ತಾಪುರ: ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿಯವರ ಮೇಲೆ ವಕೀಲನೊಬ್ಬ ಶೂ ಎಸೆಯುವ ಪ್ರಯತ್ನ ಮಾಡಿರುವ ವಕೀಲನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಂವಿಧಾನ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಸಂಜಯ ಬುಳಕರ ನೇತೃತ್ವದಲ್ಲಿ ಬುಧವಾರ ಪ್ರತಿಭಟಸಿದ ಮುಖಂಡರು ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ರಾಜಕುಮಾರ ಮರತೂರ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಸಂಜಯ ಬುಳಕರ ಮಾತನಾಡಿ, ದೇಶದ ಸರ್ವೋಚ್ಚ ನ್ಯಾಯಮೂರ್ತಿಗಳ ಮೇಲೆ ಕೋರ್ಟ್ ಹಾಲ್ ನಲ್ಲಿ ಈ ಕೃತ್ಯ ನಡೆದಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದರು.
ಇದೊಂದು ಭಯೋತ್ಪಾದಕ ಕೃತ್ಯ, ಇದು ಈ ದೇಶದ ಸಂವಿಧಾನವನ್ನು ಒಪ್ಪದ ಸಮುದಾಯದವರ ಮನಸ್ಥಿತಿಯಾಗಿದೆ. ದಲಿತರೊಬ್ಬರು ಈ ಸ್ಥಾನಕ್ಕೆ ಬಂದಿರುವುದನ್ನೆ ಸಹಿಸಲಾಗದ ದುಷ್ಟ-ಮನಸುಗಳು ಈ ರೀತಿಯ ಕೃತ್ಯವನ್ನು ಬೆಂಬಲಿಸುವದು, ತೊಡಗುವುದು ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯ ನ್ಯಾಯಮೂರ್ತಿಗಳು ದಲಿತರು, ಬೌದ್ಧ ಧರ್ಮದ ಉಪಾಸಕರು ಆಗಿದ್ದು. ಅದುವೆ ಮುಖ್ಯ ಕಾರಣವನ್ನಾಗಿಸಿಕೊಂಡು ಸನಾತನ ಧರ್ಮದ ಹೆಸರಲ್ಲಿ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ಶೂ ಎಸೆಯುವ ದುಷ್ಟ ಪ್ರಯತ್ನ ನಡೆಸಿರುವಾಗ ಈ ದೇಶದ ಸಾಮಾನ್ಯ ದಲಿತರ ಪಾಡೇನು ಎಂಬುದನ್ನು ಯೋಚಿಸಬೇಕಾಗಿದೆ ಎಂದರು.
ಕಾಶಿ ವಡ್ಡರ ಸಮಾಜದ ಸರಪಂಚ್ ವಿಠ್ಠಲ್ ಕಾಶಿ ಮಾತನಾಡಿ, ಈ ಕೃತ್ಯ ಸಂವಿಧಾನದ ಮೇಲೆ ನಡೆದ ತೀವ್ರ ಹಲ್ಲೆಯಾಗಿದೆ. ಇಂಥ ವ್ಯಕ್ತಿಗಳ ಹಿಂದಿರುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ದಿಗ್ಗಾoವ ಗ್ರಾ.ಪಂ ಅಧ್ಯಕ್ಷ ಹರಳಯ್ಯ ಬಡಿಗೇರ, ಪ್ರಮುಖರಾದ ಸಾಬಣ್ಣ ಕಲಬುರಗಿ, ಚಂದ್ರಕಾಂತ್ ಕಾಶಿ, ದೇವಪ್ಪ ತಳವಾರ, ನರೇಂದ್ರ ರೆಡ್ಡಿ ಬಂಕಲಗಿ, ಬಸವರಾಜ್ ಮೈನಾಳಕರ, ಗುರು ಪಾಟೀಲ್, ಭೀಮು ಉಪಾರ, ಹುಸನಪ್ಪ, ರಾಹುಲ್ ಮತ್ತು ಮಹೇಶ್ ದೇವರ ಸೇರಿದಂತೆ ಅನೇಕರು ಇದ್ದರು.