ಕಲಬುರಗಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ದಸರಾ ರಜೆ ಅವಧಿ ಅ.18ರ ವರೆಗೆ ವಿಸ್ತರಿಸಿದ ಸರಕಾರದ ಆದೇಶಕ್ಕೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಸ್ವಾಗತಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕಾ ನೀಡಿರುವ ಅವರು, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ-2025ರ ಗಣತಿ ಕಾರ್ಯದಲ್ಲಿ ರಾಜ್ಯಾದಾದ್ಯಂತ ಸರ್ಕಾರಿ ಶಾಲೆಗಳ ಶಿಕ್ಷಕರುಗಳಿಗೆ ಸೆ.22 ರಿಂದ ಅ.7ರ ವರೆಗೆ ಗಣತಿ ಕಾರ್ಯನಿರ್ವಹಿಸಲು ನಿಯೋಜಿಸಲಾಗಿತ್ತು. ಗಣತಿ ಕಾರ್ಯದಲ್ಲಿನ ತಾಂತ್ರಿಕ ಸಮಸ್ಯೆಗಳಿಂದ ಗಣತಿ ಕಾರ್ಯ ಪೂರ್ಣಗೊಳ್ಳದೆ ಇರುವುದರಿಂದ ಶಿಕ್ಷಕರು ದೈಹಿಕ ಮತ್ತು ಬೌದ್ಧಿಕವಾಗಿ ಒತ್ತಡದಲ್ಲಿ ಗಣತಿ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕಾಗಿ ದಸರಾ ರಜೆ ವಿಸ್ತರಿಸಲು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜಾಧ್ಯಕ್ಷ ಸಿ.ಎಸ್ ಷಡಕ್ಷರಿ ಅವರು ಮುಖ್ಯಮಂತ್ರಿಗಳಿಗೆ ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದರು
ಸಂಘದ ಮನವಿಗೆ ತಕ್ಷಣ ಸ್ಪಂದಿಸಿ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ದಸರಾ ರಜಾ ಅವಧಿ ಅ.18ರ ವರೆಗೆ ವಿಸ್ತರಿಸಿ ಆದೇಶ ನೀಡಿರುವುದಕ್ಕೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಲಬುರಗಿ ಅಧ್ಯಕ್ಷ ಬಸವರಾಜ ಬಳೂಂಡಗಿ, ಪದಾಧಿಕಾರಿಗಳಾದ ಮಹೇಶ ಹೂಗಾರ, ಶ್ರೀಮಂತ ಪಟ್ಟೇದಾರ, ಧರ್ಮರಾಜ ಜವಳಿ, ಸುರೇಶ ಶರ್ಮಾ, ಚಂದ್ರಕಾಂತ ಏರಿ, ಎಂ.ಬಿ ಪಾಟೀಲ ಮತ್ತು ಸುರೇಶ ವಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.