ಭಕ್ತಿ ಭಾವದಿಂದ ನಡೆದ ನಾಲವಾರ ಶ್ರೀಗಳ ಜನ್ಮದಿನೋತ್ಸವ

ಸುದ್ದಿ ಸಂಗ್ರಹ

ಚಿತ್ತಾಪುರ: ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮದಿನೋತ್ಸವ ಮತ್ತು ಹಿಂದಿನ ಪೀಠಾಧಿಪತಿ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯಾರಾಧನಾ ಮಹೋತ್ಸವವು ಆಯುಧ ಪೂಜೆಯ ದಿನದಂದು ಸಹಸ್ರಾರು ಭಕ್ತರ ಮಧ್ಯೆ ಭಕ್ತಿಭಾವದೊಂದಿಗೆ ನೆರವೇರಿತು.

ಅತಿವೃಷ್ಟಿ, ಭೀಮಾ ನದಿಯ ಪ್ರವಾಹದಿಂದ ರೈತರು ಸಂಕಷ್ಟ ಪರಿಸ್ಥಿತಿಯಲ್ಲಿರುವುದರಿಂದ, ಜನ್ಮದಿನದ ಅದ್ಧೂರಿ ಆಚರಣೆಗೆ ಪೂಜ್ಯರು ತಡೆಯೊಡ್ಡಿದ್ದರು ಸಹ ಬುಧವಾರ ಪ್ರಾತಃ ಕಾಲದಿಂದಲೇ ತಂಡೋಪತಂಡವಾಗಿ ಸಹಸ್ರಾರು ಭಕ್ತರು ಶ್ರೀ ಮಠಕ್ಕೆ ಆಗಮಿಸಿ, ಪೂಜ್ಯರಿಗೆ ಗುರುವಂದನೆ ಸಲ್ಲಿಸಿದರು.

ಮಠದ ಹಿಂದಿನ ಪೀಠಾಧಿಪತಿ ಲೀಲಾಮೂರ್ತಿ, ಪವಾಡಪುರುಷ ಲಿಂಗೈಕ್ಯ ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಪ್ರಯುಕ್ತ ರಾತ್ರಿ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಪೂಜ್ಯರಿಂದ ಮಹಾಮಂಗಳಾರತಿ ನೆರವೇರಿತು.

ಸಿದ್ಧತೋಟೇಂದ್ರ ಸುವರ್ಣ ಭವನದಲ್ಲಿ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಸರಳ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಮಠದ ಸದ್ಭಕ್ತರಾದ ಸಂಗಣ್ಣ ಸಾಹು ತಿಪ್ಪ ಮತ್ತಿನ್ಮಡು ಅವರಿಂದ ನಾಣ್ಯಗಳಿಂದ ಪೂಜ್ಯರ ತುಲಾಭಾರ ಸೇವೆ ನೆರವೇರಿಸಿ ಭಕ್ತಿ ಸಮರ್ಪಣೆ ಮಾಡಿದರು, ಶ್ರೀಮಠದ ಇನ್ನೋರ್ವ ಭಕ್ತಾರಾದ ಶಿವಲಿಂಗ ಭೀಮನಹಳ್ಳಿ ಬೆಂಗಳೂರು ಅವರಿಂದ ರಜತ ಪಾದುಕೆ ಸಮರ್ಪಿಸಿ ಕೃತಾರ್ಥರಾದರು.

ಪೂಜ್ಯರ 61ನೇ ಜನ್ಮದಿನೋತ್ಸವ ಪ್ರಯುಕ್ತ ಯುವ ಭಕ್ತರು ತಂದಿದ್ದ 61 ಕೆಜಿ ತೂಕದ ಅನೇಕ ಬೃಹತ್ ಕೇಕ್’ಗಳನ್ನು ಕತ್ತರಿಸುವ ಮೂಲಕ ಜನ್ಮದಿನ ಆಚರಿಸಲಾಯಿತು.

9 ದಿನಗಳ ಪರ್ಯಂತ ಪುಣ್ಯಾರಾಧನಾ ಮತ್ತು ಜನ್ಮದಿನೋತ್ಸವ ನಿಮಿತ್ತ ನಡೆದ ಸಂಗೀತ ನಾದಾರ್ಚನೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ವೈದಿಕ ಸೇವೆ ಸಲ್ಲಿಸಿದ ಶಿವಯ್ಯ ಶಾಸ್ತ್ರಿ ಶಹಾಪುರ ಹಾಗೂ ಸಂಗೀತ ಸೇವೆ ಸಲ್ಲಿಸಿದ ವಿವಿಧ ಕಲಾವಿದರಿಗೆ ಸೇರಿದಂತೆ ಅನೇಕ ಭಕ್ತರಿಗೆ ಪೂಜ್ಯರು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಜನ್ಮದಿನ ಸಮಾರಂಭದಲ್ಲಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಚಿತ್ತಾಪುರ ತಾಲೂಕ ದಂಡಾಧಿಕಾರಿ ನಾಗಯ್ಯ ಹಿರೇಮಠ್, ಸಾಹಿತಿ ಸಿದ್ಧರಾಮ ಹೊನಕಲ್, ಮಹೇಶ್ ವೀರಯ್ಯಸ್ವಾಮಿ ಚಿಂಚೋಳಿ, ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಆನಂದ ಮದರಿ, ಶಿವಯೋಗಪ್ಪ ಸಾಹು ಸನ್ನತಿ, ಸಿದ್ದು ಅಂಗಡಿ ಜೇವರ್ಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕು‌‌ಮಾರಿ ಪ್ರತೀಕ ಗಾರೆಂಪಲ್ಲಿ ಚಿತ್ತಾಪುರ ಮತ್ತು ಈಶಾ ಪಡಿಶೆಟ್ಟಿ ಯಾದಗಿರಿ ಇವರಿಂದ ಭರತನಾಟ್ಯ ನೆರವೇರಿತು. ಆಗಮಿಸಿದ್ದ ಭಕ್ತರಿಗೆ ಶ್ರೀಮಠದಲ್ಲಿ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಕೇವಲ ನಾಲವಾರ ಮಾತ್ರವಲ್ಲದೆ ದೆಹಲಿ, ಹೈದರಾಬಾದ್, ಬೆಂಗಳೂರು, ರಾಯಚೂರು, ಯಾದಗಿರಿ, ಕಲಬುರಗಿ ಜೇವರ್ಗಿ, ಚಿತ್ತಾಪುರ, ಶಹಾಪುರ ಸೇರಿದಂತೆ ನಾಡಿನ ವಿವಿಧ ಭಾಗಗಳಲ್ಲಿ ಪೂಜ್ಯರ ಜನ್ಮದಿನದ ಅಂಗವಾಗಿ ಭಕ್ತರು ಅನ್ನದಾನ, ರಕ್ತದಾನ, ರೋಗಿಗಳಿಗೆ ಹಣ್ಣು ಹಂಪಲು, ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ, ಉಚಿತ ಆರೋಗ್ಯ ತಪಾಸಣೆ ಮತ್ತು ನೇತೃ ತಪಾಸಣೆ ಶಸ್ತ್ರ ಚಿಕಿತ್ಸೆ ಶಿಬಿರಗಳನ್ನು ಆಯೋಜಿಸಿ ಅರ್ಥಪೂರ್ಣ ಆಚರಣೆ ಮಾಡಿದ್ದು ವಿಶೇಷವಾಗಿತ್ತು.

ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹಡಪದ ಅವರು ಪೂಜ್ಯರ ಜನ್ಮದಿನದ ಪ್ರಯುಕ್ತ ಕಲಬುರಗಿ ನಗರದಲ್ಲಿ ನಿರ್ಗತಿಕರು, ಅನಾಥ ಮಕ್ಕಳಿಗೆ ಉಚಿತ ಕ್ಷೌರ ಮಾಡಿ ಭಕ್ತಿ ಸಮರ್ಪಣೆ ಮಾಡಿ ಮಾದರಿಯಾದರು.

ಕಾರ್ಯಕ್ರಮವನ್ನು ಕಾರ್ಯದರ್ಶಿ ವಿರೂಪಾಕ್ಷಯ್ಯ ಸ್ವಾಮಿ ನಿರೂಪಿಸಿ, ಮಹಾದೇವ ಗಂವ್ಹಾರ ವಂದಿಸಿದರು.

Leave a Reply

Your email address will not be published. Required fields are marked *