ಕಲಬುರಗಿ: ಜನನ ನಿಯಂತ್ರಣದಲ್ಲಿ ಸುರಕ್ಷಿತ ಗರ್ಭನಿರೋಧಕ ಆಯ್ಕೆಗಳು ಮತ್ತು ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿನ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕೇಂದ್ರ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ “ವಿಶ್ವ ಗರ್ಭನಿರೋಧಕ/ಜನನ ನಿಯಂತ್ರಣ ದಿನಾಚರಣೆ”ಯಲ್ಲಿ ಮಾತನಾಡಿದ ಅವರು,ಜನಸಂಖ್ಯಾ ಸ್ಪೋಟದಿಂದ ತತ್ತರಿಸಿರುವ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಜನನ ನಿಯಂತ್ರಣ, ಕುಟುಂಬ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಅಗತ್ಯವಾಗಿದೆ ಎಂದರು.
ಅನಪೇಕ್ಷಿತ ಗರ್ಭಧಾರಣೆಗಳನ್ನು ತಡೆಯುವಲ್ಲಿ, ಲೈಂಗಿಕವಾಗಿ ಹರಡುವ ರೋಗಗಳನ್ನು ಕಡಿಮೆ ಮಾಡುವಲ್ಲಿ ಮತ್ತು ಅಸುರಕ್ಷಿತ ಗರ್ಭಪಾತವನ್ನು ಕಡಿಮೆ ಮಾಡುವಲ್ಲಿ ಗರ್ಭನಿರೋಧಕವು ಪ್ರಮುಖ ಪಾತ್ರ ವಹಿಸುತ್ತದೆ. ಗರ್ಭಿಣಿಯಾಗಲು ಬಯಸದ ಮಹಿಳೆಯರಿಗೆ ಸುರಕ್ಷಿತ ಮತ್ತು ಆಧುನಿಕ ಗರ್ಭನಿರೋಧಕ ವಿಧಾನಗಳ ಬಗ್ಗೆ ಮಾಹಿತಿ ಒದಗಿಸುವುದು, ಅನಗತ್ಯ ಗರ್ಭಧಾರಣೆ ತಡೆಗಟ್ಟುವುದು, ತಾಯಿಯ ಮರಣವನ್ನು ಕಡಿಮೆ ಮಾಡುವುದು ಮತ್ತು ಆರೋಗ್ಯಕರ ಕುಟುಂಬ ಯೋಜನೆ ಉತ್ತೇಜಿಸಲು, ವಿಶೇಷವಾಗಿ ಯುವಜನರು ತಮ್ಮ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡುವ ಉದ್ದೇಶಗಳಿಂದ ಪ್ರತಿವರ್ಷ ‘ಸೆ-26’ರಂದು ಈ ದಿನಾಚರಣೆ ಆಚರಿಸಲಾಗುತ್ತದೆ. ಇದನ್ನು 2007ರಲ್ಲಿ ಪ್ರಾರಂಭಿಸಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿ ಶ್ರೀದೇವಿ, ನಾಗೇಶ್ವರಿ ಮುಗಳಿವಾಡಿ, ಚಂದಮ್ಮ ಮರಾಠ, ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ನಾಗಮ್ಮ ಚಿಂಚೋಳಿ, ಚಂದ್ರಕಲಾ ಸೇರಿದಂತೆ ಅನೇಕರು ಇದ್ದರು.