ಭುವನೇಶ್ವರ: ಮದ್ಯದ ಅಮಲಿನಲ್ಲಿದ್ದವ ಯಾರ ಮಾತನ್ನೂ ಕೇಳುವುದಿಲ್ಲ ಎಂಬ ಮಾತಿದೆ. ಆದರೆ ಇಲ್ಲಿ ಇಬ್ಬರು ಭೂಪರು ಕಂಠಪೂರ್ತಿ ಮದ್ಯಸೇವಿಸಿ ಪೊಲೀಸರನ್ನೆ ಮನೆಗೆ ಡ್ರಾಪ್ ಮಾಡುವಂತೆ ಕೇಳಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಒಡಿಶಾದಲ್ಲಿ ಈ ಘಟನೆ ನಡೆದಿದ್ದು, ಮದ್ಯ ಸೇವಿಸಿದ ಇಬ್ಬರು ವ್ಯಕ್ತಿಗಳು ಪೊಲೀಸರಿಂದ ಅವರ ಕಾರಿನ ಕೀ ಕದ್ದಿದ್ದಾರೆ.
ಬಳಿಕ ಬೊಲೆರೋ ಕಾರಿನೊಳಗೆ ಕುಳಿತು ತಮ್ಮನ್ನು ಮನೆಗೆ ಡ್ರಾಪ್ ಮಾಡುವಂತೆ ಒತ್ತಾಯಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಪೊಲೀಸ್ ಅಧಿಕಾರಿ ವಾಹನದ ಕೀ ಕೊಡುವಂತೆ ಕೇಳಿದರೂ ಕೊಡದ ಕುಡುಕರು, ನಮಗೆ ಹಕ್ಕುಗಳು ಬೇಕು. ಮನೆಗೆ ನಮ್ಮನ್ನು ಡ್ರಾಪ್ ಮಾಡಿ ಎಂದು ಕೂಗಾಡಿದ್ದಾನೆ. ಈ ವೇಳೆ ಪೊಲೀಸ್ ಅಧಿಕಾರಿ ನಿರಾಶೆಗೊಂಡು ಅವನ ಮತ್ತು ಅವನ ಸ್ನೇಹಿತನ ಮೇಲೆ ಕೂಗಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ಕಾರು ನಮ್ಮ ತೆರಿಗೆ ಹಣದಿಂದ ಖರೀದಿ ಮಾಡಿದ್ದು, ಹೀಗಾಗಿ ಇದು ನಮಗೆ ಸೇರಿದ್ದು. ನಮ್ಮನ್ನು ಮನೆಗೆ ಡ್ರಾಪ್ ಮಾಡಬೇಕಿರುವುದು ನಿಮ್ಮ ಕರ್ತವ್ಯ ಎಂದು ವಾದಿಸಿದ್ದಾನೆ. ಅದು ಸಾಧ್ಯವಿಲ್ಲ ಎಂದು ಅಧಿಕಾರಿ ಹೇಳಿದಾಗ ನಾವೇನು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿಲ್ಲ. ಬದಲಿಗೆ ನಮ್ಮನ್ನು ಮನೆಗೆ ಬಿಡುವಂತೆ ಕೇಳುತ್ತಿದ್ದೆವೆ. ಅದೇನು ತಪ್ಪಲ್ಲವಲ್ಲ ಎಂದು ವಾದಿಸಿದ್ದಾರೆ.
ಈ ವೇಳೆ ತಾಳ್ಮೆ ಕಳೆದುಕೊಂಡ ಪೊಲೀಸರು ಬಲವಂತವಾಗಿ ಅವರ ಜೇಬಿಗೆ ಕೈ ಹಾಕಿ ಕೀ ಹುಡುಕಿದ್ದಾರೆ. ಈ ವೇಳೆ ಕುಡುಕ ಯುವಕರು ಮಾತಿನ ಚಕಮಕಿ ನಡೆಸಿದ್ದಾರೆ. ವಿಡಿಯೋದ ಅಂತ್ಯದಲ್ಲಿ ಯುವಕರು ತಾವು ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗಳು ಎಂದು ಹೇಳಿಕೊಂಡಿದ್ದಾರೆ. ಬಳಿಕ ಇಬ್ಬರನ್ನು ಬಂಧಿಸಿ ದಂಡ ಹಾಕಿದ್ದಾರೆ ಎಂದು ತಿಳಿದುಬಂದಿದೆ.