ಕಲಬುರಗಿ: ಸತತವಾಗಿ ಸುರಿದ ಮಳೆಯಿಂದ ಬೆಳೆ ಹಾನಿಯಾಗಿರುವ ಶಹಾಬಾದ ಮತ್ತು ಚಿತ್ತಾಪುರ ತಾಲೂಕಿನ ನಾನಾ ಗ್ರಾಮಗಳ ಜಮೀನುಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಭೇಟಿ ನೀಡಿ ಪರಿಶೀಲಿಸಿದರು.
ಚಿತ್ತಾಪುರ ತಾಲೂಕಿನ ವಾಡಿ ಮತ್ತು ಹಲಕಟ್ಟಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಅತಿವೃಷ್ಟಿಯಿಂದ ತೊಗರಿ, ಹೆಸರು, ಹತ್ತಿ ಬೆಳೆ ಹಾನಿಯಾಗಿರುವದು ಪರಿಶೀಲಿಸಿದರು.

ಶಹಾಬಾದ ತಾಲೂಕಿನ ರಾವೂರ ಮತ್ತು ಮಾಲಗತ್ತಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ತೊಗರಿ, ಹೆಸರು, ಉದ್ದು ಬೆಳೆ ಹಾನಿಯಾಗಿರುವದು ಪರಿಶೀಲಿಸಿದರು.
ಚಿತ್ತಾಪುರ ಮತ್ತು ಶಹಾಬಾದ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹೆಸರು, ಉದ್ದು, ತೊಗರಿ, ಹತ್ತಿ ಬೆಳೆ ಹಾನಿಯಾಗಿದ್ದು, ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಗ್ರಾಮವಾರು ಬೆಳೆ ಹಾನಿ ವರದಿ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರು ಸೇಡಂ, ಜಂಟಿ ಕೃಷಿ ನಿರ್ದೇಶಕರು ಕಲಬುರಗಿ, ತಹಸೀಲ್ದಾರರು ಚಿತ್ತಾಪುರ,
ತಹಸೀಲ್ದಾರರು ಶಹಾಬಾದ, ಸಹಾಯಕ ನಿರ್ದೇಶಕರು ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.