ಕಲಬುರಗಿ: ಮಾನವನ ದೇಹದ ಬೆಳವಣಿಗೆಗೆ ಗಾಳಿ, ನೀರು, ಆಹಾರ ಅತ್ಯವಶ್ಯಕ. ದೇಹಕ್ಕೆ ಬರುವ ರೋಗಗಳಲ್ಲಿ ಆಹಾರ ಸಂಬಂಧಿತ ಕಾಯಿಲೆಗಳು ಪ್ರಮುಖ. ವ್ಯಕ್ತಿ ಯಾವುದೆ ಕಾಯಿಲೆಗೆ ತುತ್ತಾದಾಗ ಆಹಾರ, ನೀರು ಸೇವನೆ ಅಸಾಧ್ಯವಾದಾಗ ಎಳೆನೀರು ಸೇವಿಸಿದರೆ ನೈಸರ್ಗಿಕ ಗ್ಲೂಕೋಸ್ ದೊರೆಯುತ್ತದೆ. ಇದು ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಜರುಗಿದ ‘ವಿಶ್ವ ತೆಂಗು ದಿನಾಚರಣೆ’ಯಲ್ಲಿ ತೆಂಗಿನ ಗಿಡ ನೆಟ್ಟು ನಂತರ ಮಾತನಾಡಿದ ಅವರು, ತೆಂಗು ಬೆಳೆಗಾರರಿಗೆ ಪ್ರೋತ್ಸಾಹ ದೊರೆಯಬೇಕು. ಸೂಕ್ತ ಬೆಲೆ ದೊರೆತರೆ ಬೆಳೆಗಾರರಿಗೆ ಅನಕೂಲವಾಗುತ್ತದೆ. ತೆಂಗು ಬಹುವಿಧ ಪ್ರಯೋಜನೆಗಳು ಹೊಂದಿದೆ. ಆರೋಗ್ಯ, ಧಾರ್ಮಿಕ ಮತ್ತು ಅಡುಗೆಗೆ ಬಳಕೆಯಾಗುತ್ತದೆ. ಇದನ್ನು ‘ಕಲ್ಪವೃಕ್ಷ’ ಎಂದು ಕರೆಯುವ ಮೂಲಕ ಎಲ್ಲಾ ಕಾಲಕ್ಕೂ, ಎಲ್ಲರಿಗೂ ಬೇಕಾದಂತಹ ಉಪ ಆಹಾರ, ಪಾನೀಯ, ಪೂಜಾ ಸಾಮಾನಾಗಿದೆ ಎಂದರು.
ವಿಶೇಷವಾಗಿ ತೆಂಗಿನ ಎಳೆನೀರಿನಲ್ಲಿರುವ ಪೌಷ್ಠಿಕಾಂಶಗಳು, ಕಿಣ್ವಗಳು, ಫೋಲಿಕ್ ಆಮ್ಲ, ಕ್ಯಾಟಲೇಸ್, ಡಿಹೈಡ್ರೋಜಿನೆಸ್, ಪೆರಾಕ್ಸಿಡೇಸ್ ಮುಂತಾದ ಕಿಣ್ವಗಳು ನಾವು ಸೇವಿಸುವ ಬಗೆ-ಬಗೆಯ ಆಹಾರ ಜೀರ್ಣವಾಗಲು ಇದು ಸಹಾಯ ಮಾಡುತ್ತದೆ ಕ್ಯಾಲ್ಸಿಯಂ, ವಿಟಾಮಿನ್ಸ್, ಖನಿಜಾಂಶ ಇರುವದರಿಂದ ಅದರ ಸೇವನೆಯಿಂದ ಕೀಲು-ಮೂಳೆ ನೋವು ಬರೆದಂತೆ ತಡೆಯುತ್ತದೆ. ‘ಬಿ-ಕಾಂಪ್ಲೆಕ್ಸ್’ ವಿಟಾಮಿನ್ಗಳು ಇವೆ. ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಗೆ ಸಿದ್ಧೌಷಧವಾಗಿದೆ. ತೂಕ ಕಡಿಮೆ ಮಾಡಿಕೊಳ್ಳಲು, ಜಂತು ಹುಳುವಿನ ಸಮಸ್ಯೆ ನಿವಾರಣೆಗೆ, ಚರ್ಮ ಬೇಗ ಸುಕ್ಕಾಗದಂತೆ ತಡೆಯುತ್ತದೆ. ಕ್ಯಾನ್ಸರ್ ರೋಗವು ಕೂಡ ಬರದಂತೆ ತಡೆಯಬಹುದು ಎಂಬುದನ್ನು ವೈಜ್ಞಾನಿಕವಾಗಿ ನಿರೂಪಿಸಲಾಗಿದೆ ಎಂದು ಎಳೆನೀರಿನ ಸೇವನೆಯ ಮಹತ್ವ ವಿವರಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಶಿಕ್ಷಕಿಯರಾದ ಶಿಲ್ಪಾ, ಖಮರುನ್ನೀಸ್ ಬೇಗಂ, ಸೇವಕಿ ಸುನಿತಾ ಮತ್ತು ವಿದ್ಯಾರ್ಥಿಗಳು ಇದ್ದರು.