ಚಿತ್ತಾಪುರ: ಭಂಕಲಗಾ ಗ್ರಾಮದಲ್ಲಿ ಕೊಟ್ಟಿಗೆ ಕುಸಿದು 40 ಮೇಕೆಗಳು ಸಾವು

ತಾಲೂಕು

ಚಿತ್ತಾಪುರ: ಧಾರಾಕಾರ ಮಳೆಗೆ ಕೊಟ್ಟಿಗೆ ಕುಸಿದು ಬಿದ್ದು ಕೊಟ್ಟಿಗೆಯಲ್ಲಿದ್ದ ನಲವತ್ತು ಮೇಕೆಗಳು ಮೃತಪಟ್ಟಿರುವ ಘಟನೆ ತಾಲೂಕಿನ ಭಂಕಲಗಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಗ್ರಾಮದ ಮಾಳಪ್ಪಾ ಧೂಳಪ್ಪಾ ಪೂಜಾರಿ ಅವರಿಗೆ ಸೇರಿದ
ಮೇಕೆಗಳು ಕೊಟ್ಟಿಗೆಯ ಮಾಳಿಗೆ ಮತ್ತು ಕಟ್ಟಡದ ಅವಶೇಷಗಳಡಿ ಸಿಲುಕಿ ಮೃತಪಟ್ಟಿವೆ. ಮೇಕೆಗಳ ಸಾವಿನಿಂದ ಮಾಳಪ್ಪಾ ಅವರು ಲಕ್ಷಾಂತರ ರೂ ನಷ್ಟ ಅನುಭವಿಸಿದ್ದಾರೆ.

ಘಟನೆಯ ಸುದ್ದಿ ತಿಳಿದು ಕಂದಾಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಶು ವೈದ್ಯಾಧಿಕಾರಿಗೆ ಮಾಹಿತಿ ನೀಡಿ ಮೃತಪಟ್ಟಿರುವ ಆಡುಗಳ ಶವ ಪರೀಕ್ಷೆ ಮಾಡಿಸಿ ಕಚೇರಿಗೆ ಸಲ್ಲಿಸಬೇಕು ಎಂದು ಸಂಬಂಧಿಸಿದವರಿಗೆ ಸೂಚಿಸಿದ್ದಾರೆ.

ಕೊಟ್ಟಿಗೆ ಕುಸಿದು ಮೇಕೆಗಳ ಸಾವಿನಿಂದ ಮಾಳಪ್ಪ ಪೂಜಾರಿ ಅವರ ಕುಟುಂಬ ಕಣ್ಣೀರು ಹಾಕುತ್ತಿದೆ. ಸಾಕಿ-ಸಲುಹಿದ ಮೇಕೆಗಳ ದಾರುಣ ಸಾವು ಮತ್ತು ಲಕ್ಷಾಂತರ ರೂಪಾಯಿ ನಷ್ಟವಾಗಿದ್ದಕ್ಕೆ ಸಂಕಷ್ಟಕ್ಕೆ ಗುರಿಯಾಗಿದೆ.

ಕೊಟ್ಟಿಗೆಯಲ್ಲಿ ಅಂದಾಜು 55 ಆಡುಗಳಿದ್ದವು. ಗಂಭೀರವಾಗಿ ಗಾಯಗೊಂಡಿರುವ ಅಂದಾಜು 15 ಬದುಕುಳಿದಿವೆ. ಕೆಲವಕ್ಕೆ ರಾತ್ರಿಯೆ ಚಿಕಿತ್ಸೆ ನೀಡಲಾಗಿದೆ. ಕಟ್ಟಡದ ಅವಶೇಷಗಳಡಿ ಮೇಕೆಗಳು ಸಿಲುಕಿದ್ದು ಅವಶೇಷ ತೆರವು ಮಾಡಿದ ನಂತರ ಎಷ್ಟು ಆಡುಗಳು ಮೃತಪಟ್ಟಿವೆ. ಎಷ್ಟು ಬದುಕುಳಿದಿವೆ ಎಂದು ನಿಖರ ಮಾಹಿತಿ ಸಿಗಲಿದೆ ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ
ಶಂಕರ ಕಣ್ಣಿ ಅವರು ಶನಿವಾರ ಪ್ರತಿಕ್ರಿಯಿಸಿದರು.

Leave a Reply

Your email address will not be published. Required fields are marked *