ಗುಜರಾತ್‌ ಎಮ್ಮೆಯ ಹಿಂದೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡ ನಿರ್ದೇಶಕ ಜೋಗಿ ಪ್ರೇಮ್‌

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು
ಖ್ಯಾತ ಚಿತ್ರ ನಿರ್ದೇಶಕ ಪ್ರೇಮ್ ಅವರಿಗೆ ಹೈನುಗಾರಿಕೆಗಾಗಿ ಎಮ್ಮೆ ಕೊಡಿಸುವುದಾಗಿ 4.5 ಲಕ್ಷ ರೂ ಪಡೆದು ವಂಚಿಸಿರುವ ಆರೋಪದ ಮೇಲೆ ಗುಜರಾತ್ ಮೂಲದ ವನರಾಜ್ ಭಾಯ್ ಎಂಬಾತನ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೇಮ್ ಅವರ ಮ್ಯಾನೇಜರ್ ಕಂ ನಟ ದಶಾವರ ಚಂದ್ರು ಅವರು ದೂರು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: ಪ್ರೇಮ್ ಅವರು ಹೈನುಗಾರಿಕೆಗಾಗಿ ಎರಡು ಎಮ್ಮೆ ಖರೀದಿಸಲು ಮುಂದಾಗಿದ್ದರು. ಈ ವೇಳೆ ವನರಾಜ್ ಭಾಯ್ ಎಂಬ ವ್ಯಕ್ತಿಯು ಸಂಪರ್ಕಕ್ಕೆ ಬಂದು, ಎಮ್ಮೆ ಕೊಡಿಸುವುದಾಗಿ ಭರವಸೆ ನೀಡಿದ್ದರು. ಮುಂಗಡವಾಗಿ 25 ಸಾವಿರ ರೂ. ಪಡೆದ ನಂತರ ಆತ ವಾಟ್ಸಾಪ್ ಮೂಲಕ ಎರಡು ಎಮ್ಮೆಗಳ ವಿಡಿಯೋ ಕಳುಹಿಸಿದ್ದನು.

ಇದನ್ನು ನಂಬಿದ ಪ್ರೇಮ್ ಅವರು ಹಂತ ಹಂತವಾಗಿ ಆನ್‌ಲೈನ್ ಮೂಲಕ 4.5 ಲಕ್ಷ ರೂ ಪಾವತಿಸಿದ್ದರು. ಆದರೆ ಹಣ ಪಡೆದ ನಂತರ ವನರಾಜ್ ಭಾಯ್ ಎಮ್ಮೆಗಳು ನೀಡಿದೆ ಹಣದೊಂದಿಗೆ ನಾಪತ್ತೆಯಾಗಿದ್ದಾನೆ. ಒಂದು ವಾರದಲ್ಲಿ ಎಮ್ಮೆಗಳನ್ನು ನೀಡುತ್ತೆನೆ ಎಂದಿದ್ದ ವನರಾಜ್‌ ಭಾಯ್‌ ಹಣದೊಂದಿಗೆ ಎಸ್ಕೇಪ್‌ ಆಗಿದ್ದಾನೆ. ಈಗ ಆತನ ಫೋನ್ ಸ್ವಿಚ್ ಆಫ್ ಆಗಿದ್ದು, ವಂಚನೆಗೊಳಗಾಗಿದ್ದೆನೆ ಎಂದು ಅರಿತ ಪ್ರೇಮ್ ದೂರು ದಾಖಲಿಸಿದ್ದಾರೆ.

ಅಮ್ಮನ ತೋಟಕ್ಕೆ ಎಮ್ಮೆ ಖರೀದಿಸುವ ಆಸೆಯಲ್ಲಿದ್ದ ಪ್ರೇಮ್‌
ಜೋಗಿ ಪ್ರೇಮ್ ತಮ್ಮ ತಾಯಿ ಭಾಗ್ಯಮ್ಮ ಅವರ ನೆನಪಿನಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ತಾಯಿ ಭಾಗ್ಯಮ್ಮ ಅವರ ನಿಧನದ ಬಳಿಕ, ಅವರ ಮೇಲಿನ ಅತೀವ ಪ್ರೀತಿ ಮತ್ತು ಗೌರವದಿಂದ ಪ್ರೇಮ್ ಅವರು ಮದ್ದೂರು ಬಳಿಯ ಬೆಸಗರಹಳ್ಳಿಯಲ್ಲಿ ಹತ್ತು ಎಕರೆಗೂ ಹೆಚ್ಚು ಕೃಷಿ ಜಮೀನು ಖರೀದಿಸಿ, ಅದಕ್ಕೆ ‘ಅಮ್ಮನ ತೋಟ’ ಎಂದು ಹೆಸರಿಟ್ಟಿದ್ದಾರೆ. ಗುಜರಾತ್‌ ಎಮ್ಮೆಯನ್ನು ಖರೀದಿಸಿ ಅದನ್ನು ಅಮ್ಮನ ತೋಟದಲ್ಲಿ ಸಾಕುವ ಇರಾದೆ ಹೊಂದಿದ್ದರು.

ಈ ಹೊಸ ಪ್ರಯತ್ನದ ಮೂಲಕ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಪ್ರೇಮ್, ತಾಯಿಯನ್ನು ಸದಾ ತಮ್ಮೊಂದಿಗೆ ಕಾಣುವ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಹಲವು ದೇಶಿ ತಳಿಯ ಹಸುಗಳನ್ನು ತಂದು ಸಾಕುತ್ತಿದ್ದು, ಇತ್ತೀಚೆಗೆ ಹರಿಯಾಣದ ಕಾಮಧೇನು ಗೋಶಾಲೆಗೆ ಭೇಟಿ ನೀಡಿ ಸಾಯಿವಾಲ್ ತಳಿಯ ಹಸುಗಳನ್ನು ಮತ್ತು ‘ಭೈರವ’ ಎಂದು ಹೆಸರಿಟ್ಟ ಕಪ್ಪು ಹೋರಿಯೊಂದನ್ನು ಖರೀದಿಸಿದ್ದಾರೆ. ಈ ಹೋರಿಯ ಫೋಟೊವನ್ನು ಕೂಡ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

ತಾಯಿ ಭಾಗ್ಯಮ್ಮ ಅವರಿಗೆ ಹಸು ಸಾಕಾಣಿಕೆ ಎಂದರೆ ಅಚ್ಚುಮೆಚ್ಚಾಗಿತ್ತು. ಅದೆ ಕಾರಣಕ್ಕೆ ಅವರ ನೆನಪಿನಲ್ಲಿ ಸ್ವಂತ ಡೈರಿ ಫಾರ್ಮ್‌ ನಿರ್ಮಿಸಿ, ದೇಶಿ ಹಸುಗಳ ಹಾಲನ್ನು ಮಾರುಕಟ್ಟೆಗೆ ತರಲು ಪ್ರೇಮ್ ಯೋಜಿಸಿದ್ದಾರೆ. ಪ್ರೇಮ್ ಮತ್ತು ಅವರ ಪತ್ನಿ ರಕ್ಷಿತಾ ಅವರು ಆಗಾಗ ಈ ಫಾರ್ಮ್‌ಹೌಸ್‌ಗೆ ಭೇಟಿ ನೀಡಿ ಸಮಯ ಕಳೆಯುತ್ತಾರೆ. ಬಿಡುವಿನ ವೇಳೆಯಲ್ಲಿ ಹಳ್ಳಿಗೆ ಹೋಗುವ ಇವರು, ಕಳೆದ ಜನವರಿಯಲ್ಲಿ ಸಂಕ್ರಾಂತಿ ಹಬ್ಬ ಕೂಡ ಆಚರಿಸಿದ್ದರು. ನಟಿ ರಕ್ಷಿತಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಮ್ಮನ ತೋಟದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Leave a Reply

Your email address will not be published. Required fields are marked *