ಕಲಬುರಗಿ: ಬಸ್ ಮತ್ತು ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬುರ (ಕೆ) ಗ್ರಾಮದ ಬಳಿ ಇಂದು ಸಂಜೆ ನಡೆದಿದೆ.
ಘಟನೆಯಲ್ಲಿ ಸೋಮಶೇಖರ್ (55), ಪ್ರಕಾಶ್ (28) ಮೃತ ದುರ್ದೈವಿಗಳಾಗಿದ್ದು, ಮೃತರು ಬಾಗಲಕೋಟೆ ಜಿಲ್ಲೆಯವರಾಗಿದ್ದು, ಕಾರಿನಲ್ಲಿದ್ದ ತಂದೆ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದಾರೆ.
ಕಲಬುರಗಿ ಕಡೆಯಿಂದ ಬಾಗಲಕೋಟೆಯ ಬಿಳಗಿ ಕಡೆಗೆ ಹೋಗುತ್ತಿರುವ ಸಂದರ್ಭದಲ್ಲಿ ಎದುರಿಗೆ ಬಂದ ಎನ್ಇಕೆಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದ ಅವಘಡ ಸಂಭವಿಸಿದೆ.
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಕುಳಿತಿದ್ದ ತಂದೆ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಸೋಮಶೇಖರ್ ಪತ್ನಿ ಗಾಯಗೊಂಡಿದ್ದಾರೆ, ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಗಾಣಗಾಪುರ ಠಾಣೆಯ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.