ಕೊಪ್ಪಳ: ನಗರದ ಕೆಆರ್‌ಐಡಿಎಲ್ (ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ) ದಲ್ಲಿ ಕೆಲವು ವರ್ಷ ಹೊರಗುತ್ತಿಗೆ ಆಧಾರದ ಮೇಲೆ ಕಚೇರಿಯಲ್ಲಿ ಸಹಾಯಕನಾಗಿ ಸೇವೆ ಸಲ್ಲಿಸಿದ್ದನು, ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ಕಳಕಪ್ಪ ನಿಡಗುಂದಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಈ ವೇಳೆ 24 ಮನೆಗಳು, 50 ನಿವೇಶನ, 40 ಎಕರೆ ಜಮೀನು, ಬಂಗಾರ, ಬೆಳ್ಳಿ ಸೇರಿದಂತೆ ಒಟ್ಟು 100 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಮೊದಲು ಕಸ ಗುಡಿಸುವ ಕೆಲಸಕ್ಕೆ ಸೇರಿಕೊಂಡ ಈತ, ನಂತರ ಕಚೇರಿ ಸಹಾಯಕ ಎಂದು ಹೊರಗುತ್ತಿಗೆ ಆಧಾರದ ಮೇಲೆ ಕೆಆರ್‌ಐಡಿಎಲ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. 2003 ರಿಂದ 2024ರ ವರೆಗೆ ಈತ ಕೊಪ್ಪಳ ಕೆಆರ್‌ಐಡಿಎಲ್ ಕಚೇರಿಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡಿದ್ದ, ಈ ಅವಧಿಯಲ್ಲಿ ಅಪಾರ ಆಸ್ತಿ ಗಳಿಸಿದ್ದಾನೆ ಎಂಬ ಆರೋಪ ಇತ್ತು.
ಲೋಕಾಯುಕ್ತಕ್ಕೆ ದೂರು
ಜಿಲ್ಲೆಯಲ್ಲಿ ಕೆಆರ್‌ಐಡಿಎಲ್ ಇಲಾಖೆಯಿಂದ 2022-24ರ ವರೆಗೆ ನಡೆದ ಕಾಮಗಾರಿಗಳಲ್ಲಿ 72 ಕೋಟಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಝಡ್.ಎಂ ಚಿಂಚೋಳಿಕರ್ ಹಾಗೂ ಹೊರಗುತ್ತಿಗೆ ಕಚೇರಿ ಸಹಾಯಕ ಕಳಕಪ್ಪ ನಿಡಗುಂದಿ ವಿರುದ್ಧ ದೂರು ದಾಖಲಾಗಿತ್ತು. ಈ ಅಕ್ರಮ ಕುರಿತು ಈಗಿನ ಕೆಆರ್‌ಐಡಿಎಲ್ ಅಧಿಕಾರಿಗಳು ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಹೀಗಾಗಿ ಇಬ್ಬರನ್ನೂ ಅಮಾನತು ಮಾಡಲಾಗಿತ್ತು. ಈ ಮಧ್ಯೆ, ಇಇ ಝಡ್ ಎಂ ಚಿಂಚೋಳಿಕರ್ ಅವರು ನ್ಯಾಯಾಲಯದ ಮೂಲಕ ಅಮಾನತು ಆದೇಶಕ್ಕೆ ತಡೆಯಾಜ್ಞೆ ತಂದು ದಾವಣಗೆರೆಯ ಅದೆ ಇಲಾಖೆಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
2022-24ರಲ್ಲಿ ಮೂರು ವರ್ಷದ ಅವಧಿಯಲ್ಲಿ ನಿಗಮದಲ್ಲಿ ನಡೆದ 108 ಕಾಮಗಾರಿಗಳಲ್ಲಿನ 72 ಕೋಟಿ ರೂ ಅಕ್ರಮದಲ್ಲಿನ ಸೂತ್ರದಾರನೇ ಕಳಕಪ್ಪ ನಿಡಗುಂದಿ ಆಗಿದ್ದರಿಂದ ಗುರುವಾರ ಕೊಪ್ಪಳ ಲೋಕಾಯುಕ್ತ ಅಧಿಕಾರಿಗಳು ಭಾಗ್ಯ ನಗರ ಹಾಗೂ ಕೊಪ್ಪಳದಲ್ಲಿರುವ ಅವನ ನಿವಾಸದ ಮೇಲೆ ದಾಳಿ ಮಾಡಿದ್ದರು.
ಆಸ್ತಿಯ ಮಾಹಿತಿ
ಅಂದಾಜಿನ ಪ್ರಕಾರ ಈತನ ಬಳಿ 100 ಕೋಟಿಗೂ ಅಧಿಕ ಆಸ್ತಿ ಇದೆ ಎನ್ನಲಾಗಿದೆ. ಕೊಪ್ಪಳ ಹಾಗೂ ಭಾಗ್ಯ ನಗರದಲ್ಲಿ 24 ಮನೆ ಈತನ ಹೆಸರಿನಲ್ಲಿವೆ. ಬಂಡಿ, ಹಿಟ್ನಾಳ್, ಹುಲಿಗಿ ಮತ್ತು ಯಲಬುರ್ಗಾದಲ್ಲಿ 40 ಎಕರೆ ಜಮೀನು ಈತನ ಪತ್ನಿ, ತಮ್ಮ ಮತ್ತು ಭಾವಮೈದುನ ಹೆಸರಿನಲ್ಲಿದೆ. ಜೊತೆಗೆ 50 ನಿವೇಶನಗಳು, ಎರಡು ಕಾರು, ಎರಡು ಬೈಕ್, 350 ಗ್ರಾಂ ಬಂಗಾರ, 1.5 ಕೆಜಿ ಬೆಳ್ಳಿ ಸಿಕ್ಕಿದೆ. ಇವುಗಳ ಜೊತೆಗೆ ಈತ ಬೇನಾಮಿ ಆಸ್ತಿಯನ್ನು ಹೊಂದಿದ್ದಾನೆ ಎಂದು ತಿಳಿದು ಬಂದಿದೆ.