ಕಲಬುರಗಿ: ಮುಜರಾಯಿ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಸಂಗ್ರಹವಾಗುವ ಭಕ್ತರ ದೇಣಿಗೆ ಹಣ ದೇವಾಲಯದ ಅಭೀವೃದ್ಧಿಗೆ ಮಾತ್ರ ಬಳಸಿಕೊಳ್ಳಬೇಕು, ಬೇರೆ ಬೇರೆ ಯೋಜನೆಗಳಿಗೆ ಬಳಸಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕಛೇರಿ ಮುಖಾಂತರ ಘನ ಸರ್ಕಾರದ ಮುಜರಾಯಿ ಸಚಿವರಿಗೆ ಟೆಂಗಳಿ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಮನವಿ ಮಾಡಿದ್ದಾರೆ.
ಜಿಲ್ಲಾ ಧಾರ್ಮಿಕ ಪರಿಷತ್ತು ಹಾಗೂ ವಿವಿಧ ದೇವಸ್ಥಾನಗಳ ವ್ಯವಸ್ಥಾಪಕ ಮಂಡಳಿ ಇದುವರೆಗೆ ರಚನೆಯಾಗಿಲ್ಲ. ಕೂಡಲೇ ರಚನೆ ಮಾಡಿ ಭಕ್ತಿಯ ಸೇವೆ ಮಾಡುತ್ತಿರುವ ಭಕ್ತರಿಗೆ ಪರಿಷತ್ತು ಮತ್ತು ಮಂಡಳಿಯಲ್ಲಿ ನೇಮಕ ಮಾಡುವ ಮೂಲಕ ಇನ್ನೂ ಹೆಚ್ಚು ಧಾರ್ಮಿಕ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದರು.
ಅನೇಕ ದೇವಾಲಯಗಳಲ್ಲಿ ಭಕ್ತರಿಗೆ ವಿಶ್ರಾಂತಿ ಕೊಠಡಿ, ಸುಸಜ್ಜಿತವಾಗಿ ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲ್ದಾಣ, ದೇವಾಲಯದ ಪರಿಸರದಲ್ಲಿ ಉದ್ಯಾನವನ ಇಲ್ಲದಿರುವ ಕಾರಣ ದೇವಾಲಯದಲ್ಲಿ ಭಕ್ತರಿಂದ ಸಂಗ್ರಹವಾಗುವ ದೇಣಿಗೆ ಮೇಲೆ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಬೇಕು ಎಂಬುದು ಅಂಡಗಿಯವರ ಧಾರ್ಮಿಕ ಕಳಕಳಿಯಾಗಿದೆ ಎಂದರು.
ಕಲಬುರಗಿಯಲ್ಲಿ ಜೂನ್ 10 ರಂದು ಜಿಲ್ಲಾಧಿಕಾರಿಗಳೊಂದಿಗೆ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನ ಅಭಿವೃದ್ಧಿ ಮತ್ತು ಇತರೆ ವಿಷಯ ಕುರಿತು ಸಾರ್ವಜನಿಕರಿಂದ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಶಿವರಾಜ ಅಂಡಗಿ 35 ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗದ ಕಾರಣ ಜಿಲ್ಲಾಧಿಕಾರಿಗಳಿಗೆ ಕೇಳಬೇಕಿದ್ದ ಪ್ರಶ್ನೆ ಹಾಗೆ ಉಳಿಯಬಾರೆದೆಂಬ ಕಾರಣಕ್ಕೆ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ವಿಷಯ ತಿಳಿಸಿ ಸಮಸ್ಯೆ ಪರಿಹರಿಸಲು ತಾವು ಮುತುವರ್ಜಿ ವಹಿಸಬೇಕು ಎಂಬುದು ಧಾರ್ಮಿಕ ಕಳಕಳಿಯಾಗಿದೆ ಹಾಗೂ ಮುಜುರಾಯಿ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ನೀರಿನ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ ಬಳಕೆ ನಿಷೇದಿಸಿದ್ದು ಮತ್ತು ದೇವಸ್ಥಾನಗಳ ಆಸ್ತಿಗಳ ರಕ್ಷಣೆ ಮಾಡಲು ಪ್ರತ್ಯೇಕ ಸರ್ವೆ ಮಾಡುವ ಉದ್ದೇಶ ಹೊಂದಿರುವ ಘನ ಸರ್ಕಾರದ ನಿರ್ಧಾರ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.