UPI ಪಾವತಿ ಇನ್ನಷ್ಟು ವೇಗ: ಇಂದಿನಿಂದ 10-15 ಸೆಕೆಂಡ್‌ಗಳಲ್ಲಿ ಪಾವತಿ

ಸುದ್ದಿ ಸಂಗ್ರಹ

ಹೊಸದಿಲ್ಲಿ: ದೇಶದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಯುಪಿಐ ಸೇವೆಗಳು ಸೋಮವಾರದಿಂದ ಮತ್ತಷ್ಟು ವೇಗವನ್ನು ಪಡೆದುಕೊಳ್ಳಲಿವೆ. ಇಡಿ ವ್ಯವಸ್ಥೆಯನ್ನು ಕ್ಷಿಪ್ರಗೊಳಿಸುವ ಕ್ರಮ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಜಾರಿ ಮಾಡಿದೆ. ಹೀಗಾಗಿ ಈ ಮೊದಲು 30 ಸೆಕೆಂಡ್‌ ತೆಗೆದುಕೊಳ್ಳುತ್ತಿದ್ದ ಸೇವೆಗಳು ಇನ್ನುಮುಂದೆ 10 ಅಥವಾ 15 ಸೆಕೆಂಡ್‌ಗಳಲ್ಲಿ ಲಭ್ಯವಾಗಲಿವೆ ಎನ್ನಲಾಗಿದೆ.

ಏಕೀಕೃತ ಪಾವತಿ ಇಂಟರ್ಫೇಸ್‌ (ಯುಪಿಐ) ವ್ಯವಸ್ಥೆಯನ್ನು ನಿರ್ವಹಣೆ ಮಾಡುವ ಎನ್‌ಪಿಸಿಐ ಈ ಬಗ್ಗೆ ಎಪ್ರಿಲ್‌ನಲ್ಲಿ ಅಧಿಸೂಚನೆ ಬಿಡುಗಡೆ ಮಾಡಿತ್ತು. ಈಗ ಈ ಪ್ರಕ್ರಿಯೆ ಪೂರ್ಣಗೊಂಡಿದೆ, ಸೋಮವಾರದಿಂದ ಜಾರಿಗೆ ಬರಲಿದೆ ಎನ್ನಲಾಗಿದೆ.

ಈ ವ್ಯವಸ್ಥೆಯು ವಹಿವಾಟು ನಡೆಯುವ 2 ಬ್ಯಾಂಕ್‌ ಮತ್ತು ಪಾವತಿ ಆಪ್‌’ಗಳಾದ ಗೂಗಲ್‌ ಪೇ, ಫೋನ್‌ ಪೇ, ಪೇಟಿಯಂಗಳಂತಹ ವೇದಿಕೆಗಳಿಗೂ ಪ್ರಯೋಜನ ಒದಗಿಸಲಿದ್ದು, ಪಾವತಿ ವಹಿವಾಟು ಮಾಹಿತಿ ಪರಿಶೀಲನೆ, ಹಿಮ್ಮುಖ ಪಾವತಿ, ವಿಳಾಸ ಪರಿಶೀಲನೆಯಂತಹ ಪ್ರಕ್ರಿಯೆಗಳು ವೇಗ ಪಡೆದುಕೊಳ್ಳಲಿವೆ ಎನ್ನಲಾಗಿದೆ.

ಆಗಸ್ಟ್‌ನಿಂದ ಮತ್ತಷ್ಟು ಬದಲಾವಣೆ
UPI ಸೇವೆಯಲ್ಲಿ ಆಗಸ್ಟ್‌ನಿಂದ ಮತ್ತಷ್ಟು ಬದಲಾವಣೆ ತರಲು ಯುಪಿಐ ನಿರ್ಧರಿಸಿದೆ. ಇದರಲ್ಲಿ ದಿನಕ್ಕೆ 50 ಬಾರಿ ಮಾತ್ರ ಬ್ಯಾಲೆನ್ಸ್‌ ಪರಿಶೀಲಿಸಲು ಅವಕಾಶ, ಒಬ್ಬ ಗ್ರಾಹಕರಿಗೆ 25 ಬ್ಯಾಂಕಿಂಗ್‌ ಆಪ್‌ ಮಾತ್ರ ಬಳಸಲು ಅವಕಾಶ, ಪೀಕ್‌ ಸಮಯ ಬಿಟ್ಟು ಉಳಿದ ಸಮಯದಲ್ಲಿ ಮಾತ್ರ ಆಟೋ ಪೇಗೆ ಅವಕಾಶ ಸಹಿತ ಹಲವು ಬದಲಾವಣೆ ತರಲು ನಿರ್ಧರಿಸಲಾಗಿದೆ.

ಯಾವ ಪ್ರಕ್ರಿಯೆ ಎಷ್ಟು ವೇಗ ?
ಈ ಮೊದಲು ಪಾವತಿ ಸೇವೆಯು 30 ಸೆಕೆಂಡ್‌ ತೆಗೆದುಕೊಳ್ಳುತ್ತಿತ್ತು. ಇದನ್ನು 15 ಸೆಕೆಂಡ್‌ಗೆ ಇಳಿಕೆ ಮಾಡಲಾಗಿದೆ. ಉಳಿದಂತೆ ವಹಿವಾಟು ಪರಿಶೀಲನೆ, ಹಿಮ್ಮುಖ ಪಾವತಿ, ವಿಳಾಸ ಪರಿಶೀಲನೆಗೆ ಈ ಮೊದಲು 30 ಸೆಕೆಂಡ್‌ ತಗಲುತ್ತಿತ್ತು. ಇದನ್ನು 10 ಸೆಕೆಂಡ್‌ಗೆ ಇಳಿಕೆ ಮಾಡಲಾಗಿದೆ.

Leave a Reply

Your email address will not be published. Required fields are marked *