ಉತ್ತರಪ್ರದೇಶ: ಭಕ್ತರೊಬ್ಬರ ಕೈಯಲ್ಲಿದ್ದ ಸುಮಾರು 20 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹೊಂದಿರುವ ಪರ್ಸ್ ಮಂಗವೊಂದು ಕಸಿದುಕೊಂಡು ಪರಾರಿಯಾಗಿರುವ ಘಟನೆ ಮಥುರಾ ಸಮೀಪದ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನದ ಬೃಂದಾವನ ಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಅಲಿಗಢ್ ನಿವಾಸಿ ಅಭಿಷೇಕ್ ಅಗರ್ವಾಲ್ ತಮ್ಮ ಕುಟುಂಬದ ಸದಸ್ಯರ ಜೊತೆಗೆ ವೃಂದಾವನಕ್ಕೆ ಭೇಟಿ ನೀಡಿದ್ದರು. ದೇವಸ್ಥಾನಕ್ಕೆ ತೆರಳಿ ವಾಪಸ್ ಆಗುವಾಗ ಅಗರ್ವಾಲ್ ಅವರ ಪತ್ನಿಯ ಕೈಯಲ್ಲಿದ್ದ ಪರ್ಸ್ನ್ನು ಮಂಗ ಕಸಿದುಕೊಂಡು ಪರಾರಿಯಾಗಿದೆ.
ಪರ್ಸ್’ನಲ್ಲಿ ಬೆಲೆಬಾಳುವ ಚಿನ್ನಾಭರಣ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿವ ಭಕ್ತರು ಹಾಗೂ ಸ್ಥಳೀಯರು ಮಂಗನ ಕೈಯಲ್ಲಿದ್ದ ಪರ್ಸ್ ತೆಗೆದುಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ, ಹಲವು ಗಂಟೆಗಳ ಕಾಲ ಹರಸಾಹಸ ಪಟ್ಟು ನಂತರ ಮಂಗನ ಕೈಯಲ್ಲಿದ್ದ ಪರ್ಸ್ ತೆಗೆದುಕೊಳ್ಳಲು ಸಾಧ್ಯವಾಗಿರುವುದಾಗಿ ವರದಿಯಾಗಿದೆ. ನಂತರ ಪರ್ಸ್ ಅನ್ನು ಅಗರ್ವಾಲ್ ಅವರಿಗೆ ಮರಳಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.