ಕಲಬುರಗಿ: ಸಮಸ್ತ ಕನ್ನಡಿಗರ ಪ್ರಾಚೀನ ಸಾಧನೆಗಳು ಪ್ರತಿಪಾದಿಸುವ ಭಂಕೂರ ಗ್ರಾಮದ ಐತಿಹಾಸಿಕ ಸ್ಮಾರಕಗಳು, ವೀರಗಲ್ಲುಗಳು, ಶಿಲ್ಪ ಕಲೆಗಳು, ಶಾಸನಗಳು ಸಾವಿರಾರು ವರ್ಷದ ರೋಚಕ ಇತಿಹಾಸ ಸಾರುತ್ತವೆ ಎಂದು ಸಂಸೋಧಕ- ಸಾಹಿತಿ ಮುಡುಬಿ ಗುಂಡೆರಾವ ಅಭಿಮತ ವ್ಯಕ್ತಪಡಿಸಿದರು.
ಶಹಬಾದ ತಾಲೂಕಿನ ಭಂಕೂರ ಗ್ರಾಮದ ಜೈನ ಶಾಂತಿನಾಥ ತೀರ್ಥಂಕರ ಮಂದಿರದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-16ರಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತ, ಮಾತನಾಡಿದ ಅವರು, ಭಂಕೂರಿನಲ್ಲಿ ದೊರೆಯುವ ಜೈನ ಬಸದಿ, ಉದ್ಭವ ಗಣೇಶ, ವೀರಗಲ್ಲು, ಮಹಾಸತಿ ಗಲ್ಲುಗಳು, ರಾಮಲಿಂಗೇಶ್ವರ ದೇವಸ್ಥಾನ ಪ್ರಾಚೀನ ಕಾಲದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ ಇತಿಹಾಸ ಸಾರುತ್ತವೆ. ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು ಈ ಗ್ರಾಮವನ್ನು ಆಳಿದ್ದಾರೆ ಎನ್ನುವುದಕ್ಕೆ ಇಲ್ಲಿಯ ಸ್ಮಾರಕಗಳೇ ಸಾಕ್ಷಿ. ಇಲ್ಲಿನ ಜೈನ ಬಸದಿಯು ಅದ್ಭುತ ಕಲಾತ್ಮಕವಾಗಿದೆ. ಭಂಕೂರ ಗ್ರಾಮಕ್ಕೆ ಸಾವಿರಾರು ವರ್ಷಗಳ ಇತಿಹಾಸದ ಹಿನ್ನಲೆಯಿದೆ. ಇದು ವಿವಿಧ ಧರ್ಮೀಯರು ಬಾಳಿ ಬೆಳಗಿದ ಪುಣ್ಯಭೂಮಿಯಾಗಿದೆ. ಸ್ಮಾರಕಗಳು ನಮ್ಮ ಪರಂಪರೆಯ ಪ್ರತೀಕವಾಗಿವೆ. ನಾಡಿನ ಇತಿಹಾಸ ಕಟ್ಟಿಕೊಡುವಲ್ಲಿ ಆಕಾರಗಳಾಗಿ ಸಹಾಯ ಮಾಡುತ್ತವೆ. ನಮ್ಮೂರು ನಮಗೆ ಮೇಲು. ನಮ್ಮ ನೆಲದ ಇತಿಹಾಸ ತಿಳಿಯಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ, ನಮ್ಮ ಜಿಲ್ಲೆಯ ಐತಿಹಾಸಿಕ ಸ್ಥಳಗಳಿಗೆ ತೆರಳಿ ಅಲ್ಲಿನ ಇತಿಹಾಸ, ಮಹತ್ವ, ಅದರ ಕೊಡುಗೆ ಎಲ್ಲರಿಗೂ ತಿಳಿಸಬೇಕು ಎಂಬ ಉದ್ದೇಶದಿಂದ ಕಳೆದ ಒಂದು ವರ್ಷದಿಂದ ಜಾಗೃತಿ ಕಾರ್ಯವನ್ನು ಮಾಡಲಾಗುತ್ತಿದೆ. ಇತಿಹಾಸ ಸಾರುವ ಸ್ಮಾರಕಗಳ ರಕ್ಷಣೆಯಿಂದ ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯವಿದೆ ಎಂದು ನುಡಿದರು.
ಕಲಬುರಗಿ ಜಿಲ್ಲೆಯ ಇತಿಹಾಸವೆಂದರೆ ಇಡಿ ಸಮಸ್ತ ಕರ್ನಾಟಕದ ಇತಿಹಾಸವಾಗಿದೆ. ಬಹುತೇಕ ಪ್ರಮುಖ ರಾಜಮನೆತನಗಳು ನಮ್ಮ ಜಿಲ್ಲೆಯನ್ನು ಆಳಿದ್ದಾರೆ. ಜಿಲ್ಲೆಯಲ್ಲಿನ ಸ್ಮಾರಕಗಳು ರೋಚಕವಾದ ಇತಿಹಾಸ ತಿಳಿಸುತ್ತವೆ. ಭಂಕೂರ, ಶಹಬಾದ, ಚಿತ್ತಾಪೂರ, ಸೇಡಂ ಕಲ್ಲುಗಳ ಪರಿಸರದ ಪ್ರಭಾವದಿಂದ ಜಿಲ್ಲೆಗೆ ‘ಕಲ್ಲಂಬುರಗೆ’ ಎಂಬ ಸ್ಥಳನಾಮ ಬಂದಿದೆ. ಇದಕ್ಕೆ ಹಲವಾರು ಶಾಸನಗಳು ಪುಷ್ಟಿ ನೀಡುತ್ತವೆ.
ಮುಡುಬಿ ಗುಂಡೇರಾವ
ಸಂಶೋಧಕ-ಸಾಹಿತಿ, ಸೇಡಂ
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಭಂಕೂರ್ ಕರ್ನಾಟಕ ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕ ಶಶಿಕಾಂತ ಮಡಿವಾಳ, ಪ್ರಮುಖರಾದ ಚನ್ನಪ್ಪಗೌಡ್ ಘಟ್ಟದ್, ಶೀತಲನಾಥ ಜೈನ್, ಶಾಂತಿಪ್ರಸಾದ, ಮಹಾವೀ ಬಸ್ಮೆ, ಪಲ್ಲವಿ, ಸನ್ಮತಿ, ಪ್ರಮೋದ ಸೇರಿದಂತೆ ಅನೇಕರು ಇದ್ದರು.