ಚಿತ್ತಾಪುರ: ಕ್ಷೇತ್ರದ ಗ್ರಾಮೀಣ ಭಾಗದ ಹಳ್ಳಿಗಳ ಅಭಿವೃದ್ಧಿಗೆ 150 ಕೋಟಿ ರೂ ವೆಚ್ಚದ ಕ್ರಿಯಾಯೋಜನೆ ಈಗಾಗಲೆ ಸಿದ್ದವಾಗಿದೆ. ಇದರ ಅಡಿಯಲ್ಲಿ 87 ಹಳ್ಳಿಗಳಿಗೆ ಅಗತ್ಯ ಅನುದಾನ ಲಭ್ಯವಾಗಲಿದೆ, ಮುಂದಿನ 15 ದಿನಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಅಮೃತ್ ಯೋಜನೆಯಡಿಯಲ್ಲಿ ಚಿತ್ತಾಪುರ ಹಾಗೂ ವಾಡಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಅಡಿಗಲ್ಲು, ಚಿತ್ತಾಪುರ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣ ಉದ್ಘಾಟನೆ ಸೇರಿದಂತೆ 86.79 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಮೂಲಭೂತ ಸೌಕರ್ಯ, ಕುಡಿಯುವ ನೀರು ಯೋಜನೆಗಳಿಗೆ ಆದ್ಯತೆ ನೀಡಲಾಗುವುದು. 25 ಕೋಟಿ ವೆಚ್ಚದಲ್ಲಿ ಗುಂಡಗುರ್ತಿ ಬಳಿ ಸೋಲಾರ್ ಎನರ್ಜಿ ವಿದ್ಯುತ್ ಉತ್ಪಾದನಾ ಕೆಂದ್ರ ಸ್ಥಾಪಿಸಲಾಗುತ್ತಿದೆ. ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಯೋಜನೆಗಳ ಅಡಿಯಲ್ಲಿ ಜಿಲ್ಲೆಯ ರಸ್ತೆ ಅಭಿವೃದ್ದಿ ಪಡಿಸಲಾಗುತ್ತಿದೆ. ವಾಡಿ ಹಾಗೂ ಚಿತ್ತಾಪುರ ಪಟ್ಟಣದ ಅಭಿವೃದ್ದಿಗೆ ನೀಲ ನಕ್ಷೆ ತಯಾರಿಸಲಾಗುತ್ತಿದೆ ಎಂದರು.
ಅರಿವು ಕೇಂದ್ರ ಹಾಗೂ ಕೂಸಿನ ಮನೆಗಳ ಸ್ಥಾಪನೆ
ಗ್ರಾಮೀಣಾಭಿವೃದ್ಧಿ ಇಲಾಖೆ ಅಡಿಯಲ್ಲಿ ಕೈಗೊಂಡ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದ ಸಚಿವರು, ರಾಜ್ಯಾದ್ಯಂತ 5,770 ಅರಿವು ಕೇಂದ್ರಗಳನ್ನು ಸ್ಥಾಪಿಸಿ ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಜ್ಞಾನಾರ್ಜನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಈ ಸಲ ಒಟ್ಟು 1,281 ಕೋಟಿ ರೂ ತೆರಿಗೆ ಸಂಗ್ರಹವಾಗಿದೆ, ಇದು ದಾಖಲೆಯ ಸಂಗ್ರಹವಾಗಿದೆ. ನರೇಗಾ ಯೋಜನೆಯಡಿ ತಾಯಂದಿರು ಕೆಲಸ ಮಾಡಲು ಹೋದಾಗ ಅವರ ಮಕ್ಕಳನ್ನು ಬಿಟ್ಟು ಹೋಗಲು 3,867 ಕೂಸಿನ ಮನೆಗಳನ್ನು ಸ್ಥಾಪಿಸಲಾಗಿದೆ, ಅಲ್ಲಿ ಸುಮಾರು 50,000 ಮಕ್ಕಳ ಆರೈಕೆ ಮಾಡಲಾಗುತ್ತಿದೆ ಎಂದರು.
ಗ್ರಾಹಕ ಬಾಡಿಗೆ ಕೇಂದ್ರಗಳ ಸ್ಥಾಪನೆ
ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 9 ಗ್ರಾಹಕ ಬಾಡಿಗೆ ಸೇವಾ ಕೇಂದ್ರ ಸ್ಥಾಪನೆ ಮಾಡಲಾಗಿದೆ, ಕೃಷಿ ಚಟುವಟಿಕೆ ನಡೆಸಲು ಬಾಡಿಗೆ ಆಧಾರದ ಮೇಲೆ ಕೃಷಿ ಯಂತ್ರೋಪಕರಣ ಪಡೆಯಬಹುದಾಗಿದೆ. ಖಾಸಗಿಯವರಿಗೆ ಹೋಲಿಸಿದರೆ ಯಂತ್ರೋಪಕರಣಗಳ ಬಾಡಿಗೆ ಕೂಡಾ ಕಡಿಮೆಯಾಗಿದೆ. ಚಿತ್ತಾಪುರ ತಾಲೂಕಿನಲ್ಲಿ ಇಂತಹ 2 ಕೇಂದ್ರಗಳು ಸ್ಥಾಪಿಸಲಾಗಿದೆ. ರೈತ ಬಾಂಧವರು ಈ ಕೇಂದ್ರಗಳ ಅನುಕೂಲ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕ್ಷೇತ್ರದ ಅಭಿವೃದ್ದಿ ನನ್ನ ಧರ್ಮ
ಚಿತ್ತಾಪುರ ಶಾಸಕನಾಗಿ ಹಾಗೂ ಸಚಿವನಾಗಿ ನಿಮ್ಮ ಕೆಲಸ ಮಾಡುವುದು ನನ್ನ ಧರ್ಮ. ಮೂಲಭೂತ ಸೌಕರ್ಯ, ಶೈಕ್ಷಣಿಕ ಪ್ರಗತಿ ಸೇರಿದಂತೆ ನೀರಾವರಿ ಯೋಜನೆಗಳ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆನೆ. ನನ್ನ ಅವಧಿಯಲ್ಲಿ ಶಕ್ತಿಮೀರಿ ಅಭಿವೃದ್ದಿ ಕೆಲಸ ಮಾಡಿದ್ದೆನೆ. ನೀವು ಎಷ್ಟು ಶಕ್ತಿ ತುಂಬುತ್ತಿರೋ ಮತ್ತಷ್ಟು ಕೆಲಸ ಮಾಡುತ್ತೆನೆ. ಮತದಾರರ ಆಶೀರ್ವಾದದಿಂದ ಕ್ಷೇತ್ರದಲ್ಲಿ ಅಭಿವೃದ್ದಿಯಾಗುತ್ತಿವೆ. ನಾನು ಯಾವ ಉಪಕಾರ ಮಾಡುತ್ತಿಲ್ಲ, ಬದಲಿಗೆ ನಿಮ್ಮ ಋಣ ತೀರಿಸುತ್ತಿದ್ದೆನೆ.
ನಿಮ್ಮ ಆಶೀರ್ವಾದದಿಂದ ಐಟಿ ಬಿಟಿಯಲ್ಲಿ ಪ್ರಗತಿ
ಮೊದಲ ಬಾರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಸಂದರ್ಭದಲ್ಲಿ ನಮಗೆ ಟಿಕೇಟ್ ನೀಡಲು ವಿರೋಧ ವ್ಯಕ್ತವಾಗಿತ್ತು. ಪತ್ರಿಕೆಗಳು ಕೂಡಾ ನನ್ನ ಬಗ್ಗೆ ವ್ಯಂಗ್ಯವಾಡಿ ಹೆಡ್ ಲೈನ್ ಪ್ರಕಟಿಸಿದ್ದವು. ಆ ಸಂದರ್ಭದಲ್ಲಿ ಹಿರಿಯ ನಾಯಕ ಎಸ್.ಆರ್ ಪಾಟೀಲ ಐಟಿ/ ಬಿಟಿ ಸಚಿವರಾಗಿದ್ದರು. ನಾನು ಐಟಿ-ಬಿಟಿ ಸಚಿವನಾದ ಮೇಲೆ ಕೆಲ ವರ್ಷಗಳಲ್ಲಿ ಪ್ರಿಯಾಂಕ್ ಅವರನ್ನೆ ಐಟಿ / ಬಿಟಿ ಸಚಿವರನ್ನಾಗಿ ಮಾಡಿ ಎಂದು ಎಲ್ಲರೂ ಒತ್ತಾಯಿಸಿದ್ದರು. ಇದಕ್ಕೆಲ್ಲಾ ನಿಮ್ಮ ಆಶೀರ್ವಾದವೇ ಕಾರಣ ಎಂದರು.
ಎಂಎಲ್’ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಈ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದೆ ಎಂದರು.
ವೇದಿಕೆಯ ಮೇಲೆ ಎಂಎಲ್’ಸಿ ಹಾಗೂ ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಚಂದ್ರಲಾ ಪರಮೇಶ್ವರಿ, ಪುರಸಭೆ ಅಧ್ಯಕ್ಷ ಅನ್ನಪೂರ್ಣ ನಾಗಪ್ಪ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಒ ಭಂವರ್ ಸಿಂಗ್ ಮೀನಾ, ಎಸ್’ಪಿ ಅಡ್ಡೂರು ಶ್ರೀನಿವಾಸಲು, ಮುಖಂಡರಾದ ನಾಗರೆಡ್ಡಿ ಪಾಟೀಲ ಕರದಾಳ, ಭೀಮಣ್ಣ ಸಾಲಿ, ಶ್ರೀನಿವಾಸ ಸಗರ, ಶಿವಾನಂದ ಪಾಟೀಲ, ಮಹೆಬೂಬ್ ಸಾಬ್, ರಮೇಶ ಮರಗೋಳ ಸೇರಿದಂತೆ ಅನೇಕರು ಇದ್ದರು.