ಕಲಬುರಗಿ: ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಬಹುದೊಡ್ಡ ಜವಾಬ್ದಾರಿ ಮಾಡುವ ಮೂಲಕ ರಾಷ್ಟ್ರದ ಅಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ಅನನ್ಯ ಕೊಡುಗೆ ನೀಡುತ್ತಿದೆ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ಓಂಕಾರ ವಠಾರ ಅಭಿಮತಪಟ್ಟರು.
ನಗರದ ಖಾದ್ರಿ ಚೌಕ್‌ನ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಜರುಗಿದ ‘ರಾಷ್ಟ್ರೀಯ ಪಂಚಾಯತ ರಾಜ್ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರ ವಿಕೇಂದ್ರಿಕರಣದ ಪ್ರಮುಖ ಧ್ಯೇಯದೊಂದಿಗೆ ಉದಯಿಸಿದ ಪಂಚಾಯತ್ ರಾಜ್ ಪದ್ಧತಿಯು ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಉಪನ್ಯಾಸಕ ಹಾಗೂ ಸಮಾಜ ಸೇವಕ ಎಚ್.ಬಿ ಪಾಟೀಲ ಮಾತನಾಡಿ, ಸ್ಥಳೀಯ ಸರ್ಕಾರಗಳಾದ ಗ್ರಾ.ಪಂ ಸರ್ಕಾರದ ಯೋಜನೆಗಳು, ನಿರ್ದೇಶನ, ಸಲಹೆ-ಸೂಚನೆಗಳು ಜಿ.ಪಂ ಮತ್ತು ತಾ.ಪಂ ಮೂಲಕ ಗ್ರಾಮ ಪಂಚಾಯತಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಕುಡಿಯುವ ನೀರು, ನೈರ್ಮಲ್ಯ ವ್ಯವಸ್ಥೆ, ಉದ್ಯೋಗಳನ್ನು ನೀಡುವುದು, ಬೀದಿ ದೀಪದ ವ್ಯವಸ್ಥೆ, ಕೃಷಿ ಯೋಜನೆಗಳ ಅನುಷ್ಠಾನ, ಸಾರ್ವಜನಿಕ ಗ್ರಂಥಾಲಯಗಳ ನಿರ್ವಹಣೆ, ಗ್ರಾಮೀಣ ಸಂಪರ್ಕ ರಸ್ತೆಗಳ ನಿರ್ಮಾಣ, ಸಾರ್ವಜನಿಕರಿಗೆ ಉಪಯುಕ್ತ ಮುಂತಾದ ಸೇವೆಗಳನ್ನು ನೀಡುವ ಮೂಲಕ ಗ್ರಾಮೀಣ ಪ್ರದೇಶದ ಜನರ ಸುಗಮ ಜೀವನಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಅಧಿಕಾರ ವಿಕೇಂದ್ರಿಕರಣ ಧ್ಯೇಯದೊಂದಿಗೆ 1993ರಲ್ಲಿ ಪಂಚಾಯತ ರಾಜ್ ವ್ಯವಸ್ಥೆ ಜಾರಿಗೊಳಿಸಲಾಯಿತು. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನಕೂಲವಾಗಿದೆ. ನಾಗರಿಕರು ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು. ಡಿಜಿಟಲಿಕರಣದಿಂದಾಗಿ ಪಾರದರ್ಶಕ ಮತ್ತು ಕಾಲಮಿತಿಯಲ್ಲಿ ಯೋಜನೆ ಹಾಗೂ ಸೇವೆಗಳು ಸಾರ್ವಜನಿಕರಿಗೆ ತಲುಪುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ತರಬೇತಿ ಕೇಂದ್ರದ ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.