ರಾಜ್ಯದಲ್ಲಿ 958 ನಕಲಿ ವೈದ್ಯರು ಪತ್ತೆ

ರಾಜ್ಯ

ಬೆಂಗಳೂರು: ನಮ್ಮ ರಾಜ್ಯದಲ್ಲಿ ನಕಲಿ ಡಾಕ್ಟರ್‌ಗಳ ಹಾವಳಿ ಹೆಚ್ಚಾಗಿದೆ. ಆರೋಗ್ಯ ಇಲಾಖೆ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಬರೋಬ್ಬರಿ 958 ನಕಲಿ ವೈದ್ಯರು ಕೆಲಸ ಮಾಡುತ್ತಿದ್ದಾರೆ ಎಂದು ವರದಿ ನೀಡಿದೆ. ಅದರಲ್ಲಿ ಬೆಂಗಳೂರಿನ ನೆರೆಹೊರೆ ಜಿಲ್ಲೆಗಳಾದ ಕೋಲಾರ ಹಾಗೂ ತುಮಕೂರು ಸೇರಿದಂತೆ ಬೀದರ್ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದೆ ಎಂದು ವರದಿಯಿಂದ ತಿಳಿದುಬಂದಿದೆ.

ಈ ನಕಲಿ ವೈದ್ಯರು ಸಣ್ಣ ಪುಟ್ಟ ಶೀತ, ಜ್ವರ, ಮೈಕೈ ನೋವು ಇತ್ಯಾದಿ ರೋಗಗಳಾದ ಹೈಡೋಸ್ ಔಷಧಿಗಳನ್ನು ಕೊಟ್ಟು ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ.

ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ, ಜನರು ಎಚ್ಚರಿಕೆವಹಿಸಬೇಕಿದೆ. ಆರೋಗ್ಯ ಇಲಾಖೆಯ ವಿಶೇಷ ಕಾರ್ಯಾಚರಣೆಯಲ್ಲಿ ಒಂದೆ ವರ್ಷದಲ್ಲಿ 958 ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಅತಿ ಹೆಚ್ಚು 213 ನಕಲಿ ವೈದ್ಯರಿದ್ದಾರೆ. ದುಡ್ಡಿನ ಆಸೆಗೆ ಅಮಾಯಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ‌ಈವರೆಗೆ ಪತ್ತೆಯಾದ ನಕಲಿ ವೈದ್ಯರ ಪೈಕಿ 442 ಜನರಿಗೆ ಆರೋಗ್ಯ ಇಲಾಖೆ ನೋಟೀಸ್ ಜಾರಿ ಮಾಡಿದೆ. ಇದರಲ್ಲಿ 67 ಜನರ ವಿರುದ್ದ ಕೇಸ್ ದಾಖಲು ಮಾಡಲಾಗಿದೆ. ನಕಲಿ ವೈದ್ಯರು ನಡೆಸುವ ಕ್ಲಿನಿಕ್‌ಗಳನ್ನು ಗುರುತಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ನಕಲಿ ವೈದ್ಯರಿರುವ ಟಾಪ್ – 5 ಜಿಲ್ಲೆಗಳು

ಜಿಲ್ಲೆ ಹೆಸರುನಕಲಿ ವೈದ್ಯರ ಸಂಖ್ಯೆ
ಬೀದರ್ 213
ಕೋಲಾರ 115
ತುಮಕೂರು 109
ವಿಜಯನಗರ 81
ಕಲಬುರಗಿ 64

ನಮ್ಮ ದೇಶದಲ್ಲಿ ವೈದ್ಯಕೀಯ ಕೋರ್ಸ್ ಮಾಡುವದಕ್ಕೆ ಭಾರಿ ಕಠಿಣ ಶಿಕ್ಷಣವನ್ನು ಕೊಡಲಾಗುತ್ತದೆ. ಹೀಗಾಗಿ ವೈದ್ಯಕೀಯ ಪ್ರಮಾಣ ಪತ್ರ ಪಡೆಯುವದು ಭಾರಿ ಕಷ್ಟಸಾಧ್ಯದ ಕೆಲಸವಾಗಿದೆ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಹಣ ಗಳಿಸುವುದಕ್ಕೆ ಅವಕಾಶ ಇರುವುದನ್ನು ತಿಳಿದು ಹಲವರು ನಕಲಿ ಡಾಕ್ಟರ್ ವೇಷದಲ್ಲಿ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯಕೀಯ ಕೋರ್ಸ್ ಮಾಡದೆ ನರ್ಸಿಂಗ್, ಫಾರ್ಮಸಿ ಓದಿಕೊಂಡು ಮತ್ತು ಕೆಲವರು ವೈದ್ಯರ ಕೈಕೆಳಗೆ ಕೆಲಸ ಮಾಡಿಕೊಂಡು ಅವರು ಸಣ್ಣಪುಟ್ಟ ರೋಗಗಳಿಗೆ ಕೊಡುವ ಔಷಧಿಗಳ ಬಗ್ಗೆ ತಿಳಿದುಕೊಳ್ಳುತ್ತಾರೆ.

ಇಂಥವರು ಹೆಚ್ಚಿನ ಹಣದಾಸೆಗೆ ವೈದ್ಯರು ಕೊಡುವ ಕಡಿಮೆ ಸಂಬಳದ ಕೆಲಸ ಬಿಟ್ಟು ಹಳ್ಳಿಗಳ ಕಡೆಗೆ ಹೋಗಿ ನಾವೆ ಡಾಕ್ಟರ್ ಎಂದು ಕ್ಲಿನಿಕ್ ಆರಂಭಿಸುತ್ತಾರೆ. ಅಥವಾ ವೈದ್ಯರಂತೆ ಸ್ಕೆತಾಸ್ಕೋಪ್, ಇಂಜೆಕ್ಷನ್ ಟ್ಯೂಬ್ಸ್, ಸಿರಿಂಜ್ ಹಾಗೂ ಮಾತ್ರೆಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು ಹಳ್ಳಿಗಳ ಮೇಲೆ ಬೀದಿ ಬೀದಿ ಸುತ್ತಾಡಿ ಚಿಕಿತ್ಸೆ ಕೊಡಲು ಹೋಗುತ್ತಾರೆ. ಅನಾರೋಗ್ಯ ಇದ್ದವರು ಮನೆ ಮುಂದೆ ಬಂದಿದ್ದ ಡಾಕ್ಟರ್ ಬಳಿ ಚಿಕಿತ್ಸೆ ಪಡೆದು ಕ್ಷಣಮಾತ್ರಕ್ಕೆ ಗುಣಮುಖರಾಗುತ್ತಾರೆ.

ಆದರೆ ಸಣ್ಣಪುಟ್ಟ ರೋಗಗಳಿಗೂ ಹೈಡೋಸ್ ಔಷಧಿಗಳನ್ನು ನೀಡಿದ ಮಾರಣಾಂತಿಕ ಹಾಗೂ ಗಂಭೀರ ರೋಗಗಳಿಗೆ ತುತ್ತಾಗುವಂತೆ ಮಾಡುತ್ತಾರೆ. ಗ್ರಾಮೀಣ ಜನರ ಜೀವನವನ್ನೆ ನರಕವನ್ನಾಗಿ ಮಾಡುತ್ತಾರೆ. ಗಂಭೀರ ರೋಗ ಬಂದಾಗ ಇದಕ್ಕೆ ಕಾರಣವೆನೆಂದು ತಿಳಿಯದೆ, ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಹಣವೂ ಹೊಂದಿಸಲಾಗದೆ ಬಹುತೇಕರು ಅರ್ಧಾಯುಷ್ಯಕ್ಕೆ ಜೀವ ಬಿಡುತ್ತಿದ್ದಾರೆ. ಹೀಗೆ ಜನರಿಗೆ ಯಾಮಾರಿಸಿ ಚಿಕಿತ್ಸೆ ನೀಡುತ್ತಿರುವ ಹಾಗೂ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ 958 ನಕಲಿ ವೈದ್ಯರು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಸರ್ಕಾರವೆ ಗುರುತಿಸಿದೆ.

ವೈದ್ಯೋ ನಾರಾಯಣ ಹರಿ ಎಂದು ಹೇಳುವ ನಮ್ಮ ದೇಶದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಗ್ರಾಮೀಣ ಭಾಗಗಳಲ್ಲಿ ವೈದ್ಯರು ಎಂದು ಹೇಳಿಕೊಳ್ಳುವ ಎಡವಟ್ಟು ವ್ಯಕ್ತಿಗಳ ಎದೆ ಸೀಳಿದರೂ 2 ಇಂಗ್ಲೀಷ್ ಅಕ್ಷರಗಳು ಕೂಡ ಇರುವುದಿಲ್ಲ. ಬಹುತೇಕರಿಗೆ ಎಂಬಿಬಿಎಸ್, ಬಿಎಎಂಎಸ್ ಎಂಬುದರ ವಿಸ್ತಾರ ರೂಪ ಕೇಳಿದರೂ ಹೇಳಲು ಬರುವುದಿಲ್ಲ. ಇನ್ನು ತಾವು ಜ್ವರ, ಶೀತ ಅಥವಾ ಇನ್ನೊಂದು ರೋಗಕ್ಕೆ ಕೊಡುವ ಔಷಧಿಗಳ ಸ್ಪೆಲ್ಲಿಂಗ್ ಕೇಳಿದರೂ ಹೇಳಲು ಬರುವುದಿಲ್ಲ. ಜೊತೆಗೆ ಒಂದು ವೈದ್ಯಕೀಯ ಚೀಟಿಯನ್ನು ಬರೆಯುವುದಕ್ಕೂ ಬರುವುದಿಲ್ಲ. ಇಂಥವರು ಡಾಕ್ಟರ್ ಎಂದು ತಪಾಸಣೆ ಮಾಡಿ, ಮಾತ್ರೆ ಕೊಟ್ಟು ಹೋಗುತ್ತಾರೆ. ನಕಲಿ ವೈದ್ಯರಲ್ಲಿ ಬಹುತೇಕರು ಒಂದು ಬ್ಯಾಗ್ ಹಾಕಿಕೊಂಡು ಅದರಲ್ಲಿ ಸೂಜಿ, ಮಾತ್ರೆಗಳನ್ನು ಇಟ್ಟುಕೊಂಡು ಚಿಕಿತ್ಸೆ ನೀಡುವವರೆ ಹೆಚ್ಚಾಗಿದ್ದಾರೆ.

Leave a Reply

Your email address will not be published. Required fields are marked *