ಕಲಬುರಗಿ: ಇಂದಿನ ಯುವಕರು ಕೇವಲ ಪದವಿ, ಪ್ರಮಾಣಪತ್ರ ಪಡೆದರೆ ಸಾಲದು. ವಿಷಯದ ಜ್ಞಾನವನ್ನು ಕಾರ್ಯರೂಪದಲ್ಲಿ ತರುವ ಕೌಶಲ್ಯ ಅಳವಡಿಸಿಕೊಳ್ಳಬೇಕು. ಬಹುವಿಧ ಆಯಾಮಗಳ ಚಿಂತನೆ, ಹೊಸ ಆವಿಷ್ಕಾರಗನ್ನು ಮಾಡುವ ಸೃಜನಶೀಲತೆ ಮತ್ತು ನಾವಿನ್ಯತೆ ಬೆಳೆಸಿಕೊಳ್ಳಬೇಕು. ಇವುಗಳು ರಾಷ್ಟ್ರದ ಅಭಿವೃದ್ಧಿಗೆ ಅಗತ್ಯವಾಗಿವೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಭಾನುವಾರ ಜರುಗಿದ ‘ಅಂತರಾಷ್ಟ್ರೀಯ ಸೃಜನಶೀಲತೆ ಮತ್ತು ನಾವಿನ್ಯತೆ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಸೃಜನಶೀಲ ವ್ಯಕ್ತಿ ದೇಶದ ಅಮೂಲ್ಯ ಶಕ್ತಿಯಾಗಿದ್ದಾನೆ. ಸರ್ಕಾರ ಎಲ್ಲರಿಗೂ ನೌಕರಿ ನೀಡಲು ಸಾಧ್ಯವಿಲ್ಲ. ಯುವಕರು ತಮ್ಮ ಶಿಕ್ಷಣ ಜೊತೆಗೆ ಹೊಸ-ಹೊಸ ಕೌಶಲ್ಯಗಳು, ಸೃಜನಶೀಲ ಗುಣಗಳು, ನಾವಿನ್ಯತೆಯ ಮನೋಭಾವನೆಯನ್ನು ಮೈಗೂಡಿಸಿಕೊಂಡರೆ, ಸರ್ಕಾರಿ ಕ್ಷೇತ್ರವಲ್ಲದೆ ಖಾಸಗಿ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ. ಅಲ್ಲದೆ ಸ್ವಯಂ ಉದ್ಯೋಗ ಮಾಡಲು ಕೂಡಾ ಸಾಧ್ಯವಾಗುತ್ತದೆ. ಅಭಿವೃದ್ಧಿ ಹೊಂದಿದ ಸುಪರ್ ಪವರ್ ರಾಷ್ಟ್ರಗಳಿಂದು ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುತ್ತಿರುವುದು ಗಮನಸಿದರೆ, ಕೌಶಲಗಳ ಅಳವಡಿಕೆಯ ಮಹತ್ವ ಗೊತ್ತಾಗುತ್ತದೆ. ಸೃಜನಶೀಲತೆ, ಕೌಶಲಗಳ ಅಳವಡಿಕೆಯಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿ ಜೀವನಕ್ಕೆ ಆರ್ಥಿಕ ಭದ್ರತೆ ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ದತ್ತು ಹಡಪದ, ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಡಾ.ರಾಜಶೇಖರ ಪಾಟೀಲ್, ಉಪನ್ಯಾಸಕ ಸಿದ್ದಾರೂಢ ಬಿರಾದಾರ, ಹಣಮಂತ ಶಕಾಪುರೆ ಸೇರಿದಂತೆ ಅನೇಕರು ಇದ್ದರು.