ಕಾಳಗಿ: ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಏಪ್ರಿಲ್ 18 ರಂದು ಸಾಯಂಕಾಲ 6 ಗಂಟೆಗೆ ಶರಣಬಸವೇಶ್ವರ ರಥೋತ್ಸವವು ಸಹಸ್ರಾರು ಭಕ್ತರ ಜಯ ಘೋಷಣೆಗಳ ಮಧ್ಯೆ ನಡೆಯಿತು. ಗ್ರಾಮದ ಶಾಂತೇಶ್ವರ ಹಿರೇಮಠದ ಡಾ.ಶಾಂತಸೋಮನಾಥ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಭಕ್ತರು ಉತ್ತತ್ತಿ, ಖಾರಿಕ್ ಮತ್ತು ಬಾಳೆ ಹಣ್ಣು ರಥಕ್ಕೆ ಎಸೆದು ಭಕ್ತಿ ಅರ್ಪಿಸಿದರು. ರಾತ್ರಿ ವರ್ಣರಂಜಿತ ಸಿಡಿಮದ್ದು ಸುಡುವ ಕಾರ್ಯಕ್ರಮ ನಡೆಯಿತು.
ಏ.17 ರಂದು ರಾತ್ರಿ 8 ಗಂಟೆಗೆ ಪಂಚಲಿಂಗೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ಮೆರವಣಿಗೆ ಹಾಗೂ ಖ್ಯಾತ ಮಣಿ ಡ್ರಮ್, ಕೆರಳ ಚಂಡೆ, ಚಿಕ್ಕಮಂಗಳೂರಿನ ವೀರಗಾಸೆ, ಟೆಂಗಳಿಯ ಡೊಳ್ಳು ನಂದಿ ಕೋಲು ಕುಣಿತ, ಕೋಲಾಟ, ಪುರವಂತರ ಸೇವೆ, ಕಲಬುರಗಿಯ ಬ್ಯಾಂಜೊ, ಮತ್ತಿಮೂಡ ದರ್ಬಾರ ಬ್ಯಾಂತೋ, ಬಾಜಾ ಬಜಂತ್ರಿ, ವಿವಿಧ ಗ್ರಾಮದ ಭಜನಾ ಮಂಡಳಿಯಿಂದ ಗ್ರಾಮದ ಪ್ರಮುಖ ಬೀದಿಗಲ್ಲಿ ಬಹು ವಿಜೃಂಭಣೆಯಿಂದ ಪಲ್ಲಕ್ಕಿ ಉತ್ಸವ ಜರುಗಿತು.
ಏ.18 ರಂದು ಬೆಳಗ್ಗೆ 5 ಗಂಟೆಗೆ ಪುರವಂತರಿಂದ ಅಗ್ನಿ ಪ್ರವೇಶ ನಡೆಯಿತು.
ಸಂಜೆ 5 ಗಂಟೆಗೆ ಟೆಂಗಳಿ, ತೊನಸಳ್ಳಿ ಗ್ರಾಮಗಳಿಂದ ಕುಂಭ, ನಂದಿಕೋಲ ರಥದ ಬಳಿ ತಲುಪಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಭೀಮೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿರೇಶ ವಾಲಿ ಸೇರಿದಂತೆ ಟೆಂಗಳಿ ಗ್ರಾಮದ ಮತ್ತು ಸುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.