ಸಮಾಜಕ್ಕೆ ಸಿದ್ದಮುನಿಂದ್ರ ಶಿವಯೋಗಿಗಳ ಕೊಡುಗೆ ಅಪಾರ

ತಾಲೂಕು

ಚಿತ್ತಾಪುರ: ಮಠ ಕಟ್ಟದೆ, ಭಕ್ತರ ಮನಸ್ಸನ್ನು ಕಟ್ಟಿರುವ ಪವಾಡ ಪುರುಷ, ನಡೆದಾಡುವ ದೇವರು, ಸದಾ ಸಮಾಜಪರ ಕಾಳಜಿ ಹೊಂದಿದ್ದ ಸಿದ್ದಮುನಿಂದ್ರ ಶಿವಯೋಗಿಗಗಳ ಕೊಡುಗೆ ಅಪಾರ ಎಂದು ಕಲಬುರಗಿಯ ಚವದಾಪುರಿ ಹಿರೇಮಠದ ಡಾ.ರಾಜಶೇಖರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಬೆಳಗುಂಪಾ ಪರ್ವತೇಶ್ವರ ಮಠದಲ್ಲಿ ಶುಕ್ರವಾರ ಸಂಜೆ ಜರುಗಿದ ಮಠದ ಪೂಜ್ಯ ಸಿದ್ದಮುನಿಂದ್ರ ಶಿವಯೋಗಿಗಳ ದ್ವಿತೀಯ ವರ್ಷದ ಲಿಂಗೈಕ್ಯ ಸ್ಮರಣೋತ್ಸವ ಹಾಗೂ ತನಾರತಿ ಉತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಧ್ಯಾನದಿಂದ ಮನಸ್ಸು ಶುದ್ಧಿ, ದಾನದಿಂದ ಸಮಾಜ ಶುದ್ದಿಯಾಗುತ್ತದೆ. ಸಮಾಜದಲ್ಲಿ ಗುರುವಿನ ಪಾತ್ರ ಪ್ರಮುಖವಾಗಿದೆ. ಸಮಾಜದಲ್ಲಿರುವ ಬಡವರು, ಅಸಹಾಯಕರ ಕಣ್ಣೀರು ಒರೆಸುವ, ಸಹಾಯ ಹಸ್ತ ಚಾಚುವ ಕೆಲಸ ಮಾಡಬೇಕು. ಸತ್ಕಾರ್ಯಕ್ಕೆ ಜಿಪುಣತನ ಸಲ್ಲದು ಎಂದು ಮಾರ್ಮಿಕವಾಗಿ ನುಡಿದರು.

ಮಠದ ಅಭಿನವ ಪರ್ವತೇಶ್ವರ ಶಿವಾಚಾರ್ಯರು ಮಾತನಾಡಿ, ಸಿದ್ದಮುನಿಂದ್ರ ಶಿವಯೋಗಿಗಳು ಕಾಮದೇನು-ಕಲ್ಪವೃಕ್ಷವಾಗಿದ್ದಾರೆ. ನಂಬಿದ ಭಕ್ತರನ್ನು ಕೈಹಿಡಿದು ನಡೆಸುತ್ತಾರೆ. ಅವರ ಪವಾಡ, ಲೀಲೆಗಳು ಅನೇಕ ರೀತಿಯಲ್ಲಿ ಜರುಗಿವೆ ಮತ್ತು ಈಗಲೂ ಜರುಗುತ್ತಿವೆ. ಪೂಜ್ಯರು ಮಠಕ್ಕೆ ಆಸ್ತಿ ಮಾಡದೆ, ಅಸಂಖ್ಯಾತ ಭಕ್ತರನ್ನೇ ಮಠದ ಆಸ್ತಿಯನ್ನಾಗಿಸಿದ್ದಾರೆಹ. ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಅನೇಕ ಭಕ್ತರು ಶ್ರೀಮಠಕ್ಕೆ ಆಗಮಿಸುತ್ತಾರೆ ಎಂದರು.

ಕಲಬುರಗಿಯ ಗದ್ದುಗೆ ಮಠದ ಪೂಜ್ಯ ಚರಲಿಂಗ ಶ್ರೀಗಳು ಮಾತನಾಡಿ, ಯಾವ ವ್ಯಕ್ತಿ ಸಮಾಜಕ್ಕಾಗಿ ದುಡಿಯುತ್ತಾನೆಯೋ, ಆತ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆ ನಿಲ್ಲಲು ಸಾಧ್ಯವಿದೆ. ಅಂತಹ ಗುರುಗಳು ಸಿದ್ದಮುನಿಂದ್ರ ಶಿವಯೋಗಿಗಳಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರು ಮತ್ತು ಸಮಾಜ ಸೇವಕರಾದ ಸಿದ್ರಾಮಪ್ಪ ಎಸ್.ಸಾವುಲಾಳಿ, ಶಿವರೆಡ್ಡಿ ಎಸ್.ಐನಾಪುರ ಹಾಲಗಡ್ಲಾ, ಎಚ್.ಬಿ ಪಾಟೀಲ, ವಿಕ್ರಂ ಪಾಟೀಲ್ ಅವರಿಗೆ ವಿಶೇಷವಾಗಿ ಸತ್ಕರಿಸಿ, ಗೌರವಿಸಲಾಯಿತು.

ಜೀವನ ದರ್ಶನ ಪ್ರವಚನವನ್ನು ಖ್ಯಾತ ಪ್ರವಚನಕಾರ ಅಬ್ಬೆತುಕೂರಿನ ತೋಟಯ್ಯ ಶಾಸ್ತ್ರಿ ನಡೆಸಿಕೊಟ್ಟರು. ಗವಾಯಿಗಳಾದ ಶಾಂತಲಿಂಗ ಪಾಟೀಲ ಹೊನ್ನಕಿರಣಗಿ ಸಂಗೀತ ಸೇವೆ, ಆಕಾಶ್ ಹೂಗಾರ ತಬಲಾ ಸಾಥ್ ನೀಡಿದರು.

ಚನ್ನವೀರ ತಳವಾರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. ಇದಕ್ಕಿಂತ ಮುಂಚೆ ತನಾರತಿ ಉತ್ಸವ ಸೇವೆ ಜರುಗಿತು. ಆಗಮಿಸಿದ್ದ ಭಕ್ತಾದಿಗಳಿಗೆಲ್ಲ ಪ್ರಸಾದ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪೂಜ್ಯರಾದ ಚಿದಾನಂದ ಸ್ವಾಮೀಜಿ, ಶಶಿಕುಮಾರ ಸ್ವಾಮೀಜಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಸಿದ್ದಲಿಂಗ ಸ್ವಾಮೀಜಿ, ಚನ್ನಬಸವ ರೆಡ್ಡಿ, ರೇವಪ್ಪಯ್ಯ ಸ್ವಾಮಿ ಸರಡಗಿ, ಪರ್ವತಯ್ಯ ಎಸ್.ಹಿರೇಮಠ, ಡಾ.ಶರಣಗೌಡ್ ಪಾಟೀಲ್, ವೀರಪಾಕ್ಷಯ್ಯ ಹಿರೇಮಠ, ಹಣಮಂತರಾಯ ಕಂಚನಾಳ ಗುಂಡಗುರ್ತಿ ಸೇರಿದಂತೆ ಗ್ರಾಮಸ್ಥರು, ತಾಲೂಕು ಹಾಗೂ ಜಿಲ್ಲೆಯ ವಿವಿಧ ಸ್ಥಳಗಳಿಂದ ಅನೇಕ ಭಕ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *