ವಾಡಿ: ಪಟ್ಟಣದ ಅಂಬಾಭವಾನಿ ಮಂದಿರದ ಆವರಣದಲ್ಲಿ ತಾಲೂಕು ಬಿಜೆಪಿ ಮಂಡಲದ ಮಹಿಳಾ ಮೂರ್ಚಾದಿಂದ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಮಹಿಳಾ ಮೂರ್ಚಾದ ತಾಲೂಕು ಅಧ್ಯಕ್ಷ ನಾಗುಬಾಯಿ ಜಿತುರೆ ಮಾತನಾಡಿ, ಮಹಿಳೆ ತನ್ನ ಹಕ್ಕನ್ನು ಪಡೆಯಲು ಹೋರಾಟ ನಡೆಸಿ ಗೆಲುವು ಪಡೆದ ದಿನವನ್ನೆ ವಿಶ್ವ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ. ಹಿಂದೆ ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯೆ ಜೀವಿಸುವ ಕಾಲವಿತ್ತು. ಮಾತ್ರವಲ್ಲದೆ ಮತದಾನ ಮಾಡುವ ಹಕ್ಕು ಇರಲಿಲ್ಲ. ಯಾವುದೆ ರೀತಿಯ ಸ್ವಾತಂತ್ರ್ಯ, ಸ್ವ ನಿರ್ಧಾರ, ಇಚ್ಛೆಗಳಿಗೆ ಬೆಲೆ ಇರುತ್ತಿರಲಿಲ್ಲ. ಆಕೆಯನ್ನು ಅಬಲೆಯಾಗಿ ಪರಿಗಣಿಸಿ ಶೋಷಣೆ ಮಾಡುವ ಕಾಲವಿತ್ತು. ಮಹಿಳೆಗೆ ಎಲ್ಲಾ ಸಾಮರ್ಥ್ಯವಿದ್ದರೂ ಅವಕಾಶದಿಂದ ವಂಚಿತೆಯಾಗಿದ್ದರು. ಆದರೆ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಬಹು ದೊಡ್ಡ ಸಾಧನೆಯನ್ನೆ ಮಾಡಿದ್ದಾರೆ. ಆದ್ದರಿಂದ ಸಮಾಜ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ನಮ್ಮ ಪಕ್ಷ ಸದಾ ಬೆಂಬಲ ನೀಡುತ್ತಾ ಬಂದಿದೆ ಎಂದರು.
ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ದಿನ ಬೆಳಗಾಯಿತೆಂದರೆ ಮನೆ, ಗಂಡ-ಮಕ್ಕಳು, ಕೆಲಸ, ಹಬ್ಬ ಹರಿದಿನಗಳು ಬಂತೆಂದರೆ ಪೂಜೆ-ಪುನಸ್ಕಾರ, ರಜಾ ದಿನಗಳು ಬಂತೆಂದರೆ ಮಕ್ಕಳಿಗಾಗಿ ಸಿಹಿತಿಂಡಿ ತಯಾರಿ, ಪ್ರವಾಸ, ಈ ಮಧ್ಯೆ ಬಿಡುವು ಸಿಕ್ಕಾಗಲೆಲ್ಲಾ ಸಮಾಜಸೇವೆಗೆ ತನ್ನನ್ನು ತೊಡಗಿಸಿಕೊಳ್ಳುತ್ತಾ ಎಲ್ಲವನ್ನೂ ಬಹಳ ಜಾಣ್ಮೆಯಿಂದ ನಿಭಾಯಿಸುವ ಚಾಕಚಕ್ಯತೆ ಹೊಂದಿದ್ದಾಳೆ. ಕ್ರೀಡೆ, ರಾಜಕೀಯ, ಕಲೆ, ಸಾಹಿತ್ಯ, ರಂಗಭೂಮಿ, ಸೇನೆ- ಪೋಲೀಸ್, ವೈದ್ಯಕೀಯ, ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ತನ್ನದೆಯಾದ ಛಾಪು ಮೂಡಿಸಿದ್ದಾರೆ. ಕೇವಲ ಮನೆ ಕೆಲಸಕ್ಕೆ, ಸಂಸಾರ ನೌಕೆ ಸಾಗಿಸುವ ಕಾರ್ಯಕ್ಕೆ ಮಾತ್ರ ಸೀಮಿತವಾಗಿದ್ದ ಮಹಿಳೆ, ಇಂದು ಪುರುಷರಿಗೆ ಸರಿಸಾಟಿಯಾಗಿ ಸ್ವಸಾಮರ್ಥ್ಯದಿಂದಲೇ ಲಿಂಗಸಮಾನತೆ ಸಾಧಿಸುವತ್ತ ದೃಢ ಹೆಜ್ಜೆಯಿಟ್ಟಿದ್ದಾಳೆ. ಹಿಂದೆಲ್ಲಾ ಗಂಡು ಹೇಳಿದ ಮಾತುಗಳಿಗೆ ತಲೆಯಾಡಿಸಿ ಅದು ಸರಿಯಿರಲಿ, ತಪ್ಪಿರಲಿ ಅದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಹೆಣ್ಣು ಇಂದು ಅದನ್ನು ಪ್ರಶ್ನಿಸುವಂತಹ ಹಂತಕ್ಕೆ ತಲುಪಿದ್ದಾಳೆ. ಇದಕ್ಕೆ ಮುಖ್ಯ ಕಾರಣ, ಇಂದು ಮಹಿಳೆ ಸುಶಿಕ್ಷಕಿತಳಾಗಿದ್ದಾಳೆ. ಕೇವಲ ಮನೆಯ ಆಗುಹೋಗುಗಳಷ್ಟೇ ಅಲ್ಲ, ಹೊರ ಜಗತ್ತಿನ ಅರಿವು, ಸಂದರ್ಭವನ್ನು ನಿಭಾಯಿಸುವ ಶಕ್ತಿ, ವಹಿಸಿದ ಕಾರ್ಯವನ್ನು ಪ್ರಾಮಾಣಿಕವಾಗಿ ಅಚ್ಚುಕಟ್ಟಾಗಿ ನಿಭಾಯಿಸುವ ಚಾಕಚಕ್ಯತೆ, ಜಾಣ್ಮೆ ಅವಳಲ್ಲಿದೆ. ಈ ಅಂಶಗಳು ಆಕೆಯ ರಕ್ತದಲ್ಲೇ ಕರಗತವಾಗಿವೆಯಾದರೂ ಅದನ್ನು ಮುಕ್ತವಾಗಿ ಬಹಿರಂಗಪಡಿಸಲು ಈ ಸಮಾಜ ಆಕೆಗೆ ಹಿಂದೆದೂ ಅವಕಾಶವನ್ನೇ ನೀಡಿರಲಿಲ್ಲವೆನೊ ? ಅದಕ್ಕಾಗಿಯೇ ಇಂದು ಬಹುತೇಕ ಕ್ಷೇತ್ರಗಳಲ್ಲಿ ಮಹಿಳೆಯರಿಗೇ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂದರೆ ತಪ್ಪಾಗಲಾರದು ಎಂದರು.
ಪ್ರಧಾನ ಮಂತ್ರಿ ಉಜ್ವಲ ಫಲಾನುಭವಿಗಳಾದ ಮನುಜಾ ಕಾನಕುರ್ತೆ, ಸಂಗೀತ ದಹಿಹಂಡೆ, ಸುಧಾ ತೇಲ್ಕರ್, ಶಿವಲೀಲಾ ಹಡಪದ, ರೇಣುಕಾ ದಹಿಹಂಡೆ, ಸಾವಿತ್ರಿ ಸಿಂದಗಿ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೂರ್ಚಾ ಕಾರ್ಯಕಾರಣಿ ಸದಸ್ಯ ಅಕ್ಕಮಹಾದೇವಿ ಚಿತ್ತಾಪುರ, ಭೌಸಾರ ಸಮಾಜದ ಅಧ್ಯಕ್ಷ ಅರ್ಜುನ ಕಾಳೆಕರ್, ಸಕ್ಕುಬಾಯಿ ಬಗಾಡೆ, ಸೀಮಾ ಶೆಟಗಾರ, ಪ್ರೇಮಾವತಿ ಕಾಶೆಟ್ಟಿ, ಮಹಾನಂದ ಧನ್ನಾ, ಸಾವಿತ್ರಿ ಸಿಂದಗಿ, ಶರಣಮ್ಮ ಯಾದಗಿರಿ ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ ಉಮಾಬಾಯಿ ಗೌಳಿ, ಅನುಸು ಬಾಯಿ ಪವಾರ, ಶೈಲಾ ಬಾಯಿ ಸುತ್ರಾವೆ, ಉಷಾ ಸುತ್ರಾವೆ, ಪದ್ಮಾ ಪುಲ್ಸೆ,ಸುನಿತಾ ಬಾಸುತ್ಕರ, ಅಂಬಿಕಾ ಕಾಳೆಕರ್,ಸಾರಿಕಾ ಪುಲ್ಸೆ,ರಾಮೇಶ್ವರಿ ಕಾನಕುರ್ತೆ, ಲಕ್ಷ್ಮಿ ಪತಂಗೆ, ಸಾರಿಕಾ ಬಗಡೆ, ಮೀನಾಕ್ಷಿ ಬಗಾಡೆ, ಅನ್ನಪೂರ್ಣ ದೊಡ್ಡಮನಿ, ಅರುಣಾ ಕಾನಕುರ್ತೆ, ಚಂದ್ರಕಲಾ ಮಹೇಂದ್ರಕರ್, ತನುಜಾ ಸುತ್ರಾವೆ, ಮನಿಷಾ ಕಾನಕುರ್ತೆ, ರಾಧಿಕಾ ತೆಲ್ಕರ್, ಅಶ್ವಿನಿ ಕಾನಕುರ್ತೆ ಅಲಕಾ ಹಂಚಟ್ಟೆ ಪಾಲ್ಗೊಂಡಿದ್ದರು.