ಮಹಾತ್ಮರ ಸಂದೇಶ ಸಮಾಜಕ್ಕೆ ದಾರಿದೀಪ: ಬಸವರಾಜ ಹಡಪದ

ಜಿಲ್ಲೆ

ಕಲಬುರಗಿ: ನಮ್ಮ ದೇಶದಲ್ಲಿ ಅನೇಕ ಮಹನೀಯರು ತಮ್ಮದೆಯಾದ ಕೊಡುಗೆ ನೀಡಿ, ನಮ್ಮ ದೇಶದ ಸಂಸ್ಕೃತಿ, ಪರಂಪರೆಯನ್ನು ಹೆಚ್ಚಿಸಿದ್ದಾರೆ. ಅವರನ್ನು ಯಾವುದೇ ಒಂದು ಜಾತಿ, ಧರ್ಮ, ಜಯಂತಿಗೆ ಮಾತ್ರ ಸೀಮಿತವಾಗಿಸಿದೆ, ಅವರ ನೀಡಿರುವ ತತ್ವ, ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಾತ್ಮರ ಸಂದೇಶ ಸಮಾಜಕ್ಕೆ ದಾರಿದೀಪವಾಗಿವೆ ಎಂದು ನಿವೃತ್ತ ಮುಖ್ಯ ಶಿಕ್ಷಕ, ಸವಿತಾ ಸಮಾಜದ ಮುಖಂಡ ಬಸವರಾಜ ಹಡಪದ ಹೇಳಿದರು.

ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ಮಂಗಳವಾರ ಏರ್ಪಡಿಸಿದ್ದ ‘ಸವಿತಾ ಮಹರ್ಷಿ ಜಯಂತಿ’ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಪನ್ಯಾಸಕ ಹಾಗೂ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ ಪಾಟೀಲ ಮಾತನಾಡಿ, ಸವಿತಾ ಮಹರ್ಷಿ ಬಗ್ಗೆ ಪುರಾಣಗಳಲ್ಲಿ ಉಲ್ಲೇಖಿಸಲಾದಂತೆ, ಅವರು ಆಯುರ್ವೇದ ವೈದ್ಯರಾಗಿ ದೇವತೆಗಳ ಸೇವೆ ಮಾಡುತ್ತಿದ್ದರು. ಶಿವನು ಯಜ್ಞ ಮಾಡುತ್ತಿರುವಾಗ ಆಕಸ್ಮಿಕವಾಗಿ ಅಗ್ನಿ ಸ್ಪರ್ಶವಾಗಿ ಶಿವನ ಕುದಲು ಸುಟ್ಟವು. ಆಗ ಶಿವನು ತನ್ನ ಬಲಗಣ್ಣಿನಿಂದ ಪುರುಷನನ್ನು ಸೃಷ್ಟಿಸಿದನು. ಆತನೇ ಸವಿತಾ ಮಹರ್ಷಿ. ಸವಿತಾ ಮಹರ್ಷಿಯು ನಾನಾ ವಿಧದ ಸಲಕರಣೆಗೆಳೊಂದಿಗೆ ಪೆಟ್ಟಿಗೆಯೊಂದಿಗೆ ಬಂದು ಶಿವನ ಕೇಶವನ್ನು ಸರಿಪಡಿಸಿದನು. ಅವನ ಸೇವೆಗೆ ಕೊಡುಗೆಯಾಗಿ ಕೆಲವು ವಾದ್ಯಗಳನ್ನು ದಯಪಾಲಿಸಿದನು. ಆತನೇ ಕ್ಷೌರಿಕ ಜನಾಂಗದ ಮೂಲ ಪುರುಷನೆಂದು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಶಿವನ ಕಣ್ಣಿನಿಂದ ಹುಟ್ಟಿದ ಮನುಷ್ಯನಿಗೆ ಸವಿತಾ ಮಹರ್ಷಿ ಎಂದು ಕರೆದರು. ಅದಕ್ಕಾಗಿಯೇ ಈ ಸಮಾಜವನ್ನು ನಯನಜರು ಎಂದು ಕರೆಯಲಾಗುತ್ತದೆ. ರಥ ಸಪ್ತಮಿ ದಿನದಂದು ಸೂರ್ಯ ಆರಾಧನೆಯ ದಿನ ಮಹರ್ಷಿ ಜಯಂತಿ ಆಚರಿಸಲಾಗುತ್ತದೆ. ಗಾಯಿತ್ರಿ ದೇವಿ ಸವಿತಾ ಮಹರ್ಷಿಯ ಮಗಳಾಗಿದ್ದು, ಸಾಮವೇದಕ್ಕೆ ಕೊಡುಗೆ ನೀಡಿದ್ದಾಳೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಲಿಂಗರಾಜ ಹಿರೇಗೌಡ್, ಕಾಲೇಜಿನ ಉಪನ್ಯಾಸಕರಾದ ಅಸ್ಮಾ ಜಬೀನ್, ನಯಿಮಾ ನಾಹಿದ್, ಸುವರ್ಣಲತಾ ಭಂಡಾರಿ, ಮಲ್ಲಪ್ಪ ರಂಜಣಗಿ, ರೇಣುಕಾ ಚಿಕ್ಕಮೇಟಿ, ಕೀರ್ತಿ ಭುಜುರಕೆ, ದುಂಡಪ್ಪ ಯರಗೋಳ್, ಪ್ರ.ದ.ಸ ಪ್ರೇಮಾ ಸುರಪುರ, ದ್ವಿ.ದ.ಸ ರಾಮಚಂದ್ರ ಚವ್ಹಾಣ, ಸೇವಕ ಭಾಗಣ್ಣ ಹರನೂರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *