ಕ್ರೀಡೆಗಳ ಮೂಲಕ ಬೌದ್ಧಿಕ ಮಟ್ಟ ಹೆಚ್ಚಿಸಲು ಸಹಕಾರಿ: ಸಚಿವ ಪ್ರಿಯಾಂಕ್ ಖರ್ಗೆ

ರಾಜ್ಯ

ಚಿತ್ತಾಪುರ: ಕ್ರೀಡೆಗಳ ಮೂಲಕ ಕೇವಲ ದೈಹಿಕ ಸಮರ್ಥತೆ ರೂಪುಗೊಳ್ಳದೇ ಬೌದ್ದಿಕ ಮಟ್ಟ ಹೆಚ್ಚಿಸಲು ಸಹಕಾರಿಯಾಗುತ್ತದೆ. ಕ್ರೀಡೆಯ ಜೊತೆಗೆ ವೈಜ್ಞಾನಿಕ ಮನೋಭಾವನೆ ಬೆಳೆಸಲು ಎಲ್ಲರೂ ಶ್ರಮಪಡಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ, ಅಶೋಕ ಲೈಲ್ಯಾಂಡ್ ಹಾಗೂ ಲರ್ನಿಂಗ್ ಲಿಂಕ್ ಫೌಂಡೇಶನ್ ಸಹಯೋಗದೊಂದಿಗೆ ಪಟ್ಟಣದ ಬಾಪುರಾವ್ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ “ಆಟ ನನ್ನ ಹಕ್ಕು” ಕಾರ್ಯಕ್ರಮದಲ್ಲಿ ಕ್ರೀಡಾ ಸಾಮಗ್ರಿಗಳ ವಿತರಣಾ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಈ ಯೋಜನೆಯ ಅಡಿಯಲ್ಲಿ ಚಿತ್ತಾಪುರ ತಾಲೂಕಿನ 242 ಶಾಲೆಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ ಮಾಡುತ್ತಿರುವುದು ಅತ್ಯಂತ ಪ್ರಶಂಸನಿಯ, ಕೇವಲ ಕ್ರೀಡಾ ಸಾಮಗ್ರಿಗಳ ವಿತರಣೆಯ ಕಾರ್ಯಕ್ರಮವಾಗಿರದೇ 26 ಸಾವಿರ ಮಕ್ಕಳ ಕ್ರೀಡಾ ಭವಿಷ್ಯ ರೂಪಿಸುವ ಕಾರ್ಯಕ್ರಮವಾಗಲಿದೆ ಎಂದು ಆಶಿಸಿದರು.

ಕ್ರೀಡೆಗಳಿಗೆ ಅಗತ್ಯವಾದ ಸ್ಪೂರ್ತಿದಾಯಕ ಕೆಲಸಗಳು ಆಗಬೇಕು. ಕ್ರೀಡೆಗಳಿಂದ ನಾಯಕತ್ವ ರೂಪುಗೊಳ್ಳುತ್ತದೆ. ಇದಕ್ಕೆ ತಕ್ಕದಾದ ವಾತಾವರಣ ನಿರ್ಮಾಣ ಮಾಡಲು ತಾವು ಸದಾ ಸಿದ್ದರಿರುವುದಕ, ಜಿಲ್ಲೆಯ ಶಾಲೆಗಳಿಗೆ ಕ್ರೀಡಾ ಸಾಮಗ್ರಿ ಒದಗಿಸುವುದು ಸೇರಿದಂತೆ ಕ್ರೀಡೆಗೆ ಸಂಬಂಧಿಸಿದ ಕಾರ್ಯಕ್ರಮ ರೂಪಿಸಿದರೆ ಅದಕ್ಕೆ ತಗುಲುವ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಅಭಯ ನೀಡಿದರು.

ಜಿಲ್ಲೆಯಲ್ಲಿ ಅಭಿವೃದ್ದಿಗೆ ತಾವು ಅವಿರತ ಶ್ರಮ ವಹಿಸುತ್ತಿರುವದು. ಚಿತ್ತಾಪುರದಲ್ಲಿ ಸುಸಜ್ಜಿತ ಕ್ರೀಡಾಂಗಣ‌ ನಿರ್ಮಾಣ ಮಾಡಲಾಗುತ್ತಿದೆ ಜೊತೆಗೆ ತಾಲೂಕು ಕ್ರೀಡಾ ಸಮಿತಿ ರಚನೆ ಮಾಡಲಾಗುವುದು ಎಂದರು.

ಪ್ರಾಸ್ತಾವಿಕ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಆಕಾಶ ಶಂಕರ್ ಮಾತನಾಡಿ, ಈ ಕಾರ್ಯಕ್ರಮದ ಅಡಿಯಲ್ಲಿ ಆಟದ ಸಾಮಾಗ್ರಿಗಳನ್ನು ವಿತರಿಸಲು ಪೈಲಟ್ ಪ್ರೋಗ್ರಾಂ ಆಗಿ‌ ಚಿತ್ತಾಪುರ ತಾಲೂಕಿನ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಶಾಲೆಗಳ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದ್ದು ಕಲ್ಯಾಣ ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆಯಲ್ಲಿ 893 ಹಾಗೂ ಪೌಢಶಾಲೆಯಲ್ಲಿ 231 ದೈಹಿಕ ಶಿಕ್ಷಕರಿದ್ದು ಇನ್ನೂ 310 ದೈಹಿಕ ಶಿಕ್ಷಕರ ಕೊರತೆ ಇದೆ. ಕೇವಲ ದೈಹಿಕ‌ ಶಿಕ್ಷಕರಲ್ಲದೇ ಬೇರೆ ಬೇರೆ ವಿಷಯಗಳ ಶಿಕ್ಷಕರ ಕೊರತೆ ಇದ್ದು ಈ ಕೊರತೆ ನೀಗಿಸಲು ಹತ್ತು ಸಾವಿರ‌ ಶಿಕ್ಷಕರ ಭರ್ತಿಗೆ ಪ್ರಕ್ರಿಯೆ ನಡೆಯುತ್ತಿದೆ ಎಂದ ಆಕಾಶ ಶಂಕರ್. ಸಚಿವರು ಆರ್ಟಿಕಲ್‌ 371 (J) ಜಾರಿಗಾಗಿ ರಚಿಸಲಾಗಿರುವ ಉಪ ಸಮಿತಿಯ ಅಧ್ಯಕ್ಷರಾಗಿದ್ದರಿಂದ ಈ ಪ್ರಕ್ರಿಯೆಗೆ ಅನುಕೂಲವಾಗಲಿದೆ ಎಂದರು.

ಎಮ್‌ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಸಿಇಒ ಭಂವರ್ ಸಿಂಗ್ ಮೀನಾ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಸಹಾಯಕ ಆಯ್ತುಕ್ತ ಪ್ರಭು ರೆಡ್ಡಿ, ಡಿಡಿಪಿಐ ಸೂರ್ಯಕಾಂತ ಮದಾನಿ, ಭೀಮಣ್ಣ ಸಾಲಿ, ನಾಗರೆಡ್ಡಿ ಪಾಟೀಲ ಕರದಳ್ಳಿ, ತಹಸೀಲ್ದಾರ ನಾಗಯ್ಯ ಹಿರೇಮಠ, ಬಿಇಓ ಶಶಿಧರ ಬಿರಾದಾರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳ್ಳುಂಡಗಿ, ಇಓ ಅಕ್ರಂ ಪಾಷಾ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *