ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಸೃಜನಾತ್ಮಕತೆ ಹೆಚ್ಚಿಸುತ್ತವೆ: ಸಿಸ್ಟರ್ ಸಿಂಪ್ರೋಜ್

ತಾಲೂಕು

ಚಿತ್ತಾಪುರ: ಮಕ್ಕಳಿಗೆ ಶಿಕ್ಷಣದಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಅವಶ್ಯಕ. ವಸ್ತು ಪ್ರದರ್ಶನಗಳು ಮಕ್ಕಳಲ್ಲಿರುವ ಸೃಜನಾತ್ಮಕತೆಯನ್ನು ಹೆಚ್ಚಿಸುತ್ತವೆ ಎಂದು ಶಿಶುವಿಹಾರ ಪ್ರಾಥಮಿಕ ಶಾಲೆಯ ಮುಖ್ಯಗುರು ಸಿಸ್ಟರ್ ಸಿಂಪ್ರೋಜ್ ಹೇಳಿದ್ದಾರೆ.

ಪಟ್ಟಣದ ಪ್ರಾರ್ಥನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ನಡೆಯುವ ಘಟನೆಗಳ ಮೂಲಕ ಮಕ್ಕಳು ಅನೇಕ ವಿಷಯಗಳು ಕಲಿಯುತ್ತಾರೆ. ಮಕ್ಕಳಲ್ಲಿ ಅನೇಕ ಪ್ರತಿಭೆ ಇರುತ್ತವೆ. ಅಂತಹ ಪ್ರತಿಭೆಯನ್ನು ಹೊರತರುವ ಕೆಲಸ ಶಿಕ್ಷಕರು ಮಾಡಬೇಕು. ಶಿಕ್ಷಕರಿಗೆ ಪಾಲಕರು ಪ್ರೋತ್ಸಾಹಿಸುವ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೆಕು ಎಂದರು.

ಕೆಲ ವಿದ್ಯಾರ್ಥಿಗಳು ವಿಭಿನ್ನ ಆಲೋಚನಾ ಶಕ್ತಿ ಹೊಂದಿರುತ್ತಾರೆ. ಮಕ್ಕಳ ಬುದ್ದಿಮಟ್ಟಕ್ಕೆ ಅನುಗುಣವಾಗಿ ಶಿಕ್ಷಕರು ಪಾಠ ಮಾಡಬೇಕು. ಪ್ರತಿದಿನವೂ ಹೊಸತನ್ನು ಕಲಿಸುವ ಪ್ರಯತ್ನ ಶಿಕ್ಷಕರು ಮಾಡಬೇಕು ಎಂದರು.

ಪುರಸಭೆಯ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ ಮಾತನಾಡಿ, ಮಕ್ಕಳಿಗೆ ಧನಾತ್ಮಕ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಯ ಉದ್ದೇಶವಾಗಿರುತ್ತದೆ. ನಮ್ಮ ವಾರ್ಡಿನಲ್ಲಿ ಕೆಲವು ವರ್ಷಗಳ ಹಿಂದೆ ಪ್ರಾರಂಭವಾಗಿರುವ ಪ್ರಾರ್ಥನಾ ಆಂಗ್ಲ ಮಾಧ್ಯಮ ಶಾಲೆಯು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಜನಮನಗಳಿಸಿದೆ. ಒಂದಲ್ಲ ಒಂದು ಚಟುವಟಿಕೆಯಿಂದ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತರುವಂತ ಕೆಲಸ ಶಿಕ್ಷಣ ಸಂಸ್ಥೆ ಮಾಡುತ್ತಿದೆ. ಉತ್ತಮ ಶಿಕ್ಷಕರ ತಂಡ ಹೊಂದಿದೆ, ವಿದ್ಯಾರ್ಥಿಗಳ ಏಳ್ಗೆಗೆ
ಶ್ರಮಿಸುತ್ತಿರುವದು ಶ್ಲಾಘನೀಯ ಎಂದರು.

ಓರಿಯಂಟ್ ಸಿಮೆಂಟ್ ಕಂಪನಿ ಸಹಾಯಕ ವ್ಯವಸ್ಥಾಪಕಿ ಲತಾ ರಾಠೋಡ ಮಾತನಾಡಿ, ಮಕ್ಕಳು ಮಾಡಿರುವ ಪ್ರದರ್ಶನ ವಿಭಿನ್ನವಾಗಿದ್ದು, ನೋಡಲು ತುಂಬಾ ಸಂತೋಷವೆನಿಸುತ್ತದೆ. ಮಕ್ಕಳ ಹಾಗೂ ಶಿಕ್ಷಕರ ಶ್ರಮ ತುಂಬಾವಿದೆ ಎಂದು ಅನೇಕ ಮಾದರಿಗಳನ್ನು ನೋಡಿದರೆ ತಿಳಿಯುತ್ತದೆ. ವಿದ್ಯಾರ್ಥಿ ಜಿವನದಲ್ಲಿ ಮಾಡಿರುವ ಪಠ್ಯೇತರ ಚಟುವಟಿಕೆಗಳು ಬಹಳ ಕಾಲ ನೆನಪಿರುತ್ತವೆ ಎಂದರು.

ಇಂಡಿಯಾ ಗೇಟ್, ತಾಜ್ ಮಹಲ್, ದೇಶದ ಪ್ರಮುಖ ನಾಯಕರು, ಕನ್ನಡದ ಕವಿಗಳು, ಅವಿಭಕ್ತ ಮತ್ತು ವಿಭಕ್ತ ಕುಟುಂಬ, ದೇಶದ ಪ್ರಮುಖ ಹಬ್ಬಗಳು, ಹಳ್ಳಿ ಮತ್ತು ನಗರ ಜಿವನ, ರಾಷ್ಟ್ರೀಯ ಚಿಹ್ನೆಗಳು, ಸ್ವಚ್ಚ ಭಾರತ್ ಅಭಿಯಾನ, ಕಾಡು ಪ್ರಾಣಿಗಳ ಜೀವನ, ನೀರಿನ ಮಿತ ಬಳಕೆ ಮತ್ತು ಶೇಖರಣೆ, ರೋಬೋಟ್, ರೈತರ ಜೀವನ, ಎಟಿಎಂ ಮಶಿನ್, ಸಂಸತ್ತು, ರಿಮೋಟ್ ಕಾರು, ಕಾಲಗಳು, ಆರೋಗ್ಯ, ಆಕೃತಿಗಳು ಹೀಗೆ ಅನೇಕ ವಿಭಿನ್ನ ಮಾದರಿಯನ್ನು ಮಕ್ಕಳು ಮಾಡಿರುವದನ್ನು ನೋಡಿ ಪಾಲಕರು ಆನಂದಿಸಿದರು.

ಕಾರ್ಯಕ್ರಮದಲ್ಲಿ ಪ್ರಾರ್ಥನಾ ಶಾಲೆಯ ಅಧ್ಯಕ್ಷ ಜಗದೇವ ದಿಗ್ಗಾಂವಕರ್, ಶಿಕ್ಷಕ ವಿಶ್ವರಾಜ್ ಟೋನಿ, ಶಿಕ್ಷಕಿಯರಾದ ಶಮಿನ್, ರೋಜ್ ಮೇರಿ, ಲಲಿತಾ ರಾಠೋಡ, ನಿರ್ಮಲ, ಶೈಲಜಾ ರಾಯ್, ಪ್ರೀತಿ, ಕಾವ್ಯ ಮಾರಡಗಿ, ವಿಜಯಲಕ್ಷ್ಮಿ, ಸಂಜನಾ ಮಠಪತಿ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು, ಪೋಷಕರು ಇದ್ದರು.


Leave a Reply

Your email address will not be published. Required fields are marked *