ಚಿತ್ತಾಪುರ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪ್ರಶ್ನೆಯೇ ಉದ್ಭವಿಸದು. ಡೆತ್ ನೋಟ್ ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಸುಳ್ಳು ಹೇಳುವ ಬಿಜೆಪಿಯವರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜಕೀಯ ದುರುದ್ದೇಶದಿಂದ ವ್ಯರ್ಥ ಆರೋಪ, ಹೋರಾಟ ಮುಂದುವರಿಸಿದರೆ ನಾವು ಬಿಜೆಪಿ ನಾಯಕರ ವಿರುದ್ಧ ಧರಣಿ ಮಾಡಲು ಸಿದ್ಧರಿದ್ದೆವೆ ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿನ್ ಆತ್ಮಹತ್ಯೆ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸ್ವತಃ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿಕೆ ನೀಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಹೆಸರಿಗೆ ಕಪ್ಪು ಮಸಿ ಬಳಿಯುವ ಹುನ್ನಾರ ಮಾಡಲಾಗುತ್ತಿದೆ. ಸಚಿವ ಖರ್ಗೆ ಅವರು 15 ವರ್ಷಗಳ ಕಾಲ ಶಾಸಕರಾಗಿ, ಸಂಪುಟ ದರ್ಜೆಯ ಸಚಿವರಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ದುರುದ್ದೇಶವಾಗಿ ಬಿಜೆಪಿ ನಾಯಕರು ಅವರಿಗೆ ಕೆಟ್ಟ ಹೆಸರು ತರಲು ಈ ರೀತಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಬಿಜೆಪಿಯವರ ಕುತಂತ್ರ ಫಲಿಸದು ಎಂದು ಹೇಳಿದರು.