ಪ್ರಾಥಮಿಕ ಶಾಲೆ, ಹಾಸ್ಟೆಲ್‌ಗ‌ಳಿಗೆ ಜಿಲ್ಲಾಧಿಕಾರಿ, ಸಿಇಓ ಭೇಟಿ

ಸುದ್ದಿ ಸಂಗ್ರಹ

ಚಿತ್ತಾಪುರ: ವಸತಿ ನಿಲಯಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವಾರಕ್ಕೆ ಒಂದು ಬಾರಿಯಾದರೂ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ವಿವಿಧ ಸರ್ಕಾರಿ ವಸತಿ ನಿಲಯ, ಅಂಗನವಾಡಿ ಕೇಂದ್ರ, ಸರ್ಕಾರಿ ಆಸ್ಪತ್ರೆ ಸೇರಿದಂತೆ ಹಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೇಲ್’ಗೆ ಭೇಟಿ ನೀಡಿ ಅಡುಗೆ ಕೋಣೆ, ಊಟದ ವ್ಯವಸ್ಥೆ, ತರಕಾರಿ, ಬೇಳೆಕಾಳು, ಸ್ವಚ್ಛತೆ ಮತ್ತು ಇನ್ನಿತರಗಳ ಬಗ್ಗೆ ಪರಿಶೀಲನೆ ನಡೆಸಿ ವಿದ್ಯಾರ್ಥಿನಿಯರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿದರು.

ನಂತರ ಪ್ರತಿ ವಾರ ವಸತಿ ನಿಲಯಗಳಿಗೆ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಬೇಕು, ಇದರಿಂದ ಮೇಲ್ವಿಚಾರಕರು ಸಹಿತ ಎಚ್ಚರಿಕೆಯಿಂದ ಎಲ್ಲಾ ವ್ಯವಸ್ಥೆ ಮಾಡುತ್ತಾರೆ ಅಲ್ಲದೆ ಹಾಸ್ಟೇಲ್’ನಲ್ಲಿ ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳಲು ವಾರ್ಡನ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಬಾಹರ ಪೇಠ ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಿಕ್ಷಕರು ನೀಡಿದ ವಿದ್ಯಾಭ್ಯಾಸದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಬೆರೆದು ಗಣಿತ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಕ್ಕಳೊಂದಿಗೆ ಪ್ರಶ್ನೋತ್ತರಗಳು ನಡೆಸಿದರು. ಅಲ್ಲದೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸಂವಿಧಾನ ಪೀಠಕೆಯನ್ನು ಕಂಠಪಾಠ ಮಾಡಿ ಹೇಳಿರುವುದನ್ನು ಕಂಡು ಸಂತಸಗೊಂಡು ಶಿಕ್ಷಕರಿಗೆ ಶ್ಲಾಘಿಸಿದರು. ಮಕ್ಕಳಿಗೆ ಪೊಲೀಸ್ ಹುದ್ದೆ ಕುರಿತು, ಪಿಎಸ್ಐ ಶ್ರೀಶೈಲ ಅಂಬಾಟಿ ವಿವರಣೆ ನೀಡಿದರು.

ನಂತರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಒಳ ರೋಗಿಗಳಿಗೆ, ಹೊರ ರೋಗಿಗಳಿಗೆ ಕಲ್ಪಿಸಿದ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಭೇಟಿ ನೀಡಿ ಚರ್ಮ ಗಂಟು ರೋಗದ ವಿರುದ್ಧ ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಭಂವ್ಹಾರ ಸಿಂಗ್ ಮೀನಾ, ಪ್ರೋಫೇಸ್ನರಿ ಐಎಎಸ್ ಅಧಿಕಾರಿ ಮೀನಾಕ್ಷಿ, ಸೇಡಂ ಸಹಾಯಕ ಆಯುಕ್ತ ಆಶಪ್ಪಾ ಪೂಜಾರಿ ಸೇರಿದಂತೆ ತಾಲೂಕ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು‌.

Leave a Reply

Your email address will not be published. Required fields are marked *