ಸುದ್ದಿ ಸಂಗ್ರಹ ಮುಂಬೈ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಸಿರೇ ಆಗಿದ್ದ ಲೆಜೆಂಡ್ ಎಂ.ಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ನಿವೃತ್ತಿ ಘೋಷಿಸಿದ್ದಾರೆ. ಈ ವಿಷಯವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಖಚಿತಪಡಿಸಿದೆ.
ಗುಡ್ನ್ಯೂಸ್ ಏನಂದರೆ, ಐಪಿಎಲ್ನಲ್ಲಿ ಇಷ್ಟು ವರ್ಷಗಳ ಕಾಲ ಪ್ಲೇಯರ್ ಆಗಿ ನಿವೃತ್ತಿಯಾದ ಮಹಿ ಅವರನ್ನು ಸಿಎಸ್ಕೆ ನೂತನ ಮೆಂಟರ್ ಆಗಿ ನೇಮಕ ಮಾಡಿಕೊಂಡಿದೆ.
5 ಟ್ರೋಫಿ ತಂದುಕೊಟ್ಟ ದಾಖಲೆ
2008ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಸೇರಿಕೊಂಡ ಮಹಿ ಈವರೆಗೆ ಚೆನ್ನೈ ಪರ 272 ಪಂದ್ಯಗಳನ್ನಾಡಿದ್ದಾರೆ. ನಾಯಕನಾಗಿ 5 ಬಾರಿ ಟ್ರೋಫಿ ತಂದುಕೊಟ್ಟ ದಾಖಲೆಯನ್ನೂ ಬರೆದಿದ್ದಾರೆ. 38.3 ಸರಾಸರಿಯಲ್ಲಿ 5,439 ರನ್ ಗಳಿಸಿದ್ದಾರೆ. ಇದರಲ್ಲಿ 264 ಸಿಕ್ಸ್, 24 ಅರ್ಧಶತಕಗಳೂ ಸೇರಿವೆ.
2023ರಲ್ಲಿ ಸಿಎಸ್ಕೆ ಟ್ರೋಫಿ ಗೆದ್ದಾಗಲೇ, ಮಹಿ ನಿವೃತ್ತಿ ಘೋಷಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಧೋನಿ ಇನ್ನೂ ಎರಡು ಸೀಸನ್ಗಳನ್ನ ಆಡುವುದಾಗಿ ಹೇಳಿದ್ದರು. 2026ರ ಆವೃತ್ತಿಯಲ್ಲಿ ಮಹಿ ತಂಡದಲ್ಲಿದ್ದರೂ, ಒಂದೆ ಒಂದು ಪಂದ್ಯವನ್ನೂ ಆಡದೇ ಹೊರಗುಳಿದರು. ಈ ಬಾರಿ ಟೂರ್ನಿ ಆರಂಭ ಆಗುವುದಕ್ಕೆ ಮುನ್ನವೇ ಐಪಿಎಲ್ಗೆ ನಿವೃತ್ತಿ ಘೋಷಿಸಿದ್ದಾರೆ. ವಿಶೇಷವೆಂದ್ರೆ ಇಷ್ಟು ದಿನ ಆಟಗಾರನಾಗಿ ನೋಡುತ್ತಿದ್ದ ಸಿಎಸ್ಕೆ ಅಭಿಮಾನಿಗಳು ಇನ್ಮುಂದೆ ಧೋನಿ ಅವರನ್ನ ಕೋಚ್ ಆಗಿ ನೋಡುತ್ತಾರೆ.
ಧೋನಿ ನಮ್ಮ ತಂಡದ ಗುರುತು: ಎನ್. ಶ್ರೀನಿವಾಸನ್
ಧೋನಿ ನಿವೃತ್ತಿ ಬೆನ್ನಲ್ಲೇ ಸಿಎಸ್ಕೆ ಮಾಲೀಕ ಎನ್. ಶ್ರೀನಿವಾಸನ್ ಅವರು ಮಹಿ ಅವರೊಂದಿಗಿನ ದೀರ್ಘಕಾಲದ ಬಾಂಧವ್ಯವನ್ನು ಸ್ಮರಿಸಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.
ಎಂ.ಎಸ್ ಧೋನಿ ಇಲ್ಲದೆ ಸಿಎಸ್ಕೆ ಇಲ್ಲ. ಸುಮಾರು ಎರಡು ದಶಕಗಳಿಂದ ನಾವು ಪರಸ್ಪರ ಜೊತೆಯಾಗಿ ನಡೆದು, ಬೆಳೆದಿದ್ದೇವೆ. ಗೆಲುವುಗಳು, ಸೋಲುಗಳು ಮತ್ತು ಎಲ್ಲ ಏರಿಳಿತಗಳಲ್ಲೂ ನಮ್ಮ ಪ್ರಯಾಣ ಮುಂದುವರಿದಿದೆ. ನಮ್ಮ ಸಂಬಂಧ ಇಷ್ಟೊಂದು ಗಟ್ಟಿಯಾಗಿರಲು ಒಂದೆ ಕಾರಣವಿದೆ. ನಾವು ಪರಸ್ಪರರ ಉದ್ದೇಶಗಳನ್ನು ಎಂದಿಗೂ ಪ್ರಶ್ನಿಸುವುದಿಲ್ಲ. ಆ ನಂಬಿಕೆಯೇ ಈ ಅದ್ಭುತ ಪ್ರಯಾಣವನ್ನು ಸಾಧ್ಯವಾಗಿಸಿದೆ. 2008ರಲ್ಲಿ ಧೋನಿ ಸಿಎಸ್ಕೆ ತಂಡದ ಭಾಗವಾಗಿರಬೇಕು ಎಂದು ನಾನು ಪಟ್ಟು ಹಿಡಿದಿದ್ದೆ. ಅದು ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಎಂಬುದು ಈಗ ಸಾಬೀತಾಗಿದೆ. ಫ್ರಾಂಚೈಸಿಗಾಗಿ ಅವರು ಮಾಡಿದ ಸಾಧನೆಗಳಷ್ಟೇ ಅಲ್ಲ, ಅವರು ಎಂತಹ ವ್ಯಕ್ತಿ ಎಂಬುದೂ ಇದಕ್ಕೆ ಕಾರಣ. ಧೋನಿ ಎಂದೆಂದಿಗೂ ನಮ್ಮ ಗುರುತಿನ ಭಾಗವಾಗಿರುತ್ತಾರೆ. ಸಿಎಸ್ಕೆ ಯಾವಾಗಲೂ ಅವರ ಮನೆಯೇ ಆಗಿರುತ್ತದೆ ಎಂದು ಶ್ರೀನಿವಾಸನ್ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.