ನೀನು ಕೊಲ್ಲದಿದ್ದರೆ ನಾನೇ ಕೊಲ್ತೀನಿ- ಪತಿಯನ್ನೆ ಮುಗಿಸಲು ಪತ್ನಿ-ಪ್ರಿಯಕರನ ಸ್ಕೆಚ್‌; ಚಾಟ್‌ ನೋಡಿ ಪೊಲೀಸರ ಮೊರೆ ಹೋದ ಗಂಡ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ತೆಲಂಗಾಣ
ಪತ್ನಿ ಹಾಗೂ ಆಕೆಯ ಶಂಕಿತ ಪ್ರಿಯಕರ ಸೇರಿಕೊಂಡು ತನ್ನನ್ನ ಕೊಲೆ ಮಾಡಿ, ಅದನ್ನು ರಸ್ತೆ ಅಪಘಾತದಂತೆ ಬಿಂಬಿಸಲು ಸಂಚು ರೂಪಿಸಿದ್ದರು ಎಂದು ಆರೋಪಿಸಿ ತೆಲಂಗಾಣದ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಮಹಬೂಬಾಬಾದ್ ಜಿಲ್ಲೆಯ ಗ್ರಾಮವೊಂದರ ನಿವಾಸಿ ಗಾಡೆ ರಾಜೇಶ್ವರ ರಾವ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಪತ್ನಿ ಭವಾನಿ ಹಾಗೂ ಖಮ್ಮಂನ ಕೊರಿಯರ್ ಡೆಲಿವರಿ ಏಜೆಂಟ್ ಸೈದುಲು ನಡುವೆ ನಡೆದಿರುವ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್‌ ಸಂಭಾಷಣೆಗಳನ್ನು ತಾವು ಪತ್ತೆಹಚ್ಚಿರುವುದಾಗಿ ಆರೋಪಿಸಿದ್ದಾರೆ.

ರಾಜೇಶ್ವರ ರಾವ್ ಅವರ ದೂರಿನ ಪ್ರಕಾರ, ತಾನು ಅವರ ರಾಸಲೀಲೆಗೆ ಅಡ್ಡಿಯಾಗಿರೋದ್ರಿಂದ ನನ್ನನ್ನ ಮುಗಿಸಲು ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಜೀವಕ್ಕೆ ಮಾತ್ರವಲ್ಲದೆ, ತಮ್ಮ ಇಬ್ಬರು ಪುತ್ರಿಯರ ಸುರಕ್ಷತೆಗೂ ಅಪಾಯವಿದೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.

2016ರಲ್ಲಿ ಮದುವೆ, ಇಬ್ಬರು ಹೆಣ್ಣುಮಕ್ಕಳು
ರಾಜೇಶ್ವರ ರಾವ್ ಅವರು 2016 ರಲ್ಲಿ ಭವಾನಿಯನ್ನ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ತಮ್ಮ ಪತ್ನಿ, ಖಮ್ಮಂ ನಲ್ಲಿ ಕೊರಿಯರ್ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಸೈದುಲು ಎಂಬಾತನೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಳು. ನಾನು ಇಲ್ಲದಿದ್ದಾಗ ಸೈದುಲು ತನ್ನ ಮನೆಗೆ ಬರುತ್ತಿದ್ದ ಎಂದು ರಾಜೇಶ್ವರ ರಾವ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜುಲೈ 27ರಂದು ಸಿಕ್ಕಿತಂತೆ ಶಾಕಿಂಗ್ ಚಾಟ್
ಜುಲೈ 27ರಂದು ಪತ್ನಿಯ ವರ್ತನೆಯ ಬಗ್ಗೆ ಅನುಮಾನಗೊಂಡ ರಾಜೇಶ್ವರ ರಾವ್, ಆಕೆಯ ಮೊಬೈಲ್ ಪರಿಶೀಲಿಸಿದಾಗ ವಾಟ್ಸಪ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಭವಾನಿ ಮತ್ತು ಸೈದುಲು ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಗಳ ಮೆಸೇಜ್‌ ಪತ್ತೆಯಾಗಿದೆ. ಆ ಚಾಟ್‌ಗಳಲ್ಲಿ ತಮ್ಮನ್ನ ಹೇಗೆ ಕೊಲೆ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆದಿತ್ತು. ಮನೆಯೊಳಗೆ ಕೊಲೆ ಮಾಡಿದರೆ ಅನುಮಾನ ಮೂಡಬಹುದು. ಹೀಗಾಗಿ ತನ್ನ ಸಾವನ್ನು ರಸ್ತೆ ಅಪಘಾತದಂತೆ ಬಿಂಬಿಸುವ ಕುರಿತು ಚರ್ಚಿಸಲಾಗಿತ್ತು ಎಂದು ದೂರಿನಲ್ಲಿ ಹೇಳಿದ್ದಾರೆ ರಾಜೇಶ್ವರ ರಾವ್‌.

ನೀನು ಕೊಲ್ಲದಿದ್ದರೆ ನಾನೇ ಕೊಲ್ಲುತ್ತೇನೆ
ಈ ಪ್ರಕರಣದ ಅತ್ಯಂತ ಆಘಾತಕಾರಿ ಅಂಶವೆಂದರೆ, ಭವಾನಿ ಸೈದುಲುಗೆ ತನ್ನ ಪತಿಯನ್ನ ಕೊಲ್ಲುವಂತೆ ಹೇಳಿದ್ದಾಳೆ ಎನ್ನಲಾದ ಸಂದೇಶ ಕೂಡ ಇತ್ತಂತೆ. ʻನೀನು ಅವನನ್ನ ಕೊಲ್ಲದಿದ್ದರೆ, ನಾನೇ ಕೊಲ್ಲುತ್ತೇನೆʼ ಎಂಬ ಸಂದೇಶವನ್ನ ಭವಾನಿ ಕಳುಹಿಸಿದ್ದಾಳೆ ಎಂದು ರಾಜೇಶ್ವರ ರಾವ್ ಆರೋಪಿಸಿದ್ದಾರೆ. ಈ ಸಂಭಾಷಣೆಗಳ ಸ್ಕ್ರೀನ್‌ಶಾಟ್‌ಗಳು ಸೇರಿದಂತೆ ಇತರೆ ಡಿಜಿಟಲ್ ದಾಖಲೆಗಳನ್ನ ರಾಜೇಶ್ವರ ರಾವ್ ಪೊಲೀಸರಿಗೆ ಸಲ್ಲಿಸಿದ್ದಾರೆ.

ಪೊಲೀಸರಿಗೆ ದೂರು, ತನಿಖೆ ಆರಂಭ
ರಾಜೇಶ್ವರ ರಾವ್ ಅವರ ದೂರಿನ ಆಧಾರದ ಮೇಲೆ ಪೊಲೀಸರು ಝೀರೋ ಎಫ್‌ಐಆರ್ ದಾಖಲಿಸಿದ್ದಾರೆ. ಬಳಿಕ ಪ್ರಕರಣವನ್ನ ಸಂಬಂಧಿತ ವ್ಯಾಪ್ತಿಯ ಖಮ್ಮಂ ಗ್ರಾಮೀಣ ಪೊಲೀಸರಿಗೆ ವರ್ಗಾಯಿಸಲಾಗಿದೆ. ಖಮ್ಮಂ ಗ್ರಾಮೀಣ ಇನ್ಸ್‌ಪೆಕ್ಟರ್ ಎಂ. ರಾಜು ಅವರ ಪ್ರಕಾರ, ದೂರುದಾರರು ಸಲ್ಲಿಸಿರುವ ಚಾಟ್‌ ಮೆಸೇಜ್‌ಗಳು ಸೇರಿದಂತೆ ಎಲ್ಲಾ ಸಾಕ್ಷ್ಯಗಳನ್ನ ಪೊಲೀಸರು ಪರಿಶೀಲಿಸುತ್ತಿದ್ದಾರೆ. ತನಿಖೆ ಮುಂದುವರಿದಿದೆ.

ಪತ್ನಿ-ಪ್ರಿಯಕರ ನಾಪತ್ತೆ ?
ದೂರಿನ ಬಳಿಕ ಭವಾನಿ ಹಾಗೂ ಸೈದುಲು ಇಬ್ಬರೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *