ಕಲಬುರಗಿ: ವರ್ಗಾವಣೆಯಾದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ಗೆ ಆತ್ಮೀಯ ಬೀಳ್ಕೊಡುಗೆ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಜಿಲ್ಲೆಯಲ್ಲಿ ಹೊಸ ತಹಸೀಲ್ದಾರ್‌ ಕಚೇರಿಗಳ ಆರಂಭ, 4 ಹೊಸ ಪ್ರಜಾಸೌಧ ಕಾಮಗಾರಿಗಳಿಗೆ ಚಾಲನೆ, ಸಕಾಲ ಸೇವೆಯಲ್ಲಿ ನಂ.1, 364 ಕಂದಾಯ ಗ್ರಾಮ ಘೋಷಣೆ, ಹಕ್ಕು ಪತ್ರ ವಿತರಣೆ, ಕಲಬುರಗಿ ರೊಟ್ಟಿಗೆ ಅಂತರರಾಷ್ಟ್ರೀಯ ಮಾನ್ಯತೆ, ಕಾರ್ಮಿಕರ ಆಶ್ರಯ ತಂಗುದಾಣ, ಅನಾಥ ಮಕ್ಕಳ ದತ್ತು ಕಾರ್ಯ, ರಾಜಿ ಇಲ್ಲದ ಕೆಲಸ ಜಿಲ್ಲಾಧಿಕಾರಿಯಾಗಿ ಬಿ.ಫೌಜಿಯಾ ತರನ್ನುಮ್‌ ಅವರು ತಮ್ಮ ಆಡಳಿತ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಅಧಿಕಾರಿಗಳು ಬಿಚ್ಚಿಟ್ಟ ಯಾದಿ ಇದು.

ವರ್ಗಾವಣೆಯಾದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌ ಅವರಿಗೆ ಬೀಳ್ಕೊಡುಗೆ ಮತ್ತು ನೂತನ ಜಿಲ್ಲಾಧಿಕಾರಿ ಇಕ್ರಮ್ ಶರೀಫ್‌ ಅವರಿಗೆ ಸ್ವಾಗತ ಸಮಾರಂಭ ನಗರದ ಡಾ. ಎಸ್‌.ಎಂ ಪಂಡಿತ ರಂಗಮಂದಿರದಲ್ಲಿ ಬುಧವಾರ ನಡೆಯಿತು. ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ನೆಚ್ಚಿನ ಜಿಲ್ಲಾಧಿಕಾರಿಗೆ ಆತ್ಮೀಯ ಬೀಳ್ಕೊಡುಗೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ, ಫೌಜಿಯಾ ತರನ್ನುಮ್‌ ಅವರು ಜಿಲ್ಲಾಧಿಕಾರಿಯಾಗಿ ಬಂದ ಮೇಲೆ ಎಷ್ಟೊ ತಿಂಗಳ ಕಾಲ ಸಕಾಲ ಮತ್ತು ಎಜೆಎಸ್‌ಕೆ ಸೇವೆಯಲ್ಲಿ ಕಲಬುರಗಿ ನಂಬರ್‌ 1 ಸ್ಥಾನದಲ್ಲಿದೆ. ಅವರು ಕಲಬುರಗಿ ಜಿಲ್ಲೆ ಸ್ಮರಿಸುವಂಥ ಕೆಲಸ ಮಾಡಿದ್ದಾರೆ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ವಿ.ಪಾಟೀಲ ಮಾತನಾಡಿ, ‘ಜಿಲ್ಲಾಧಿಕಾರಿ ಅವರ ಅವಧಿಯಲ್ಲಿ ಅಮೂಲ್ಯ ಶಿಶುಗೃಹದ ಮೂಲಕ 17 ಮಕ್ಕಳನ್ನು ದತ್ತು ನೀಡಿದ್ದು, ಅವರಿಗೆ ಉಜ್ವಲ ಭವಿಷ್ಯ ಸಿಕ್ಕಂತಾಗಿದೆ. ಅನಾಥ ಮಕ್ಕಳೊಂದಿಗೆ ಜನ್ಮದಿನ, ದೀಪಾವಳಿ ಆಚರಿಸುತ್ತಿದ್ದ ಮಾತೃಹೃದಯಿ ಅವರು’ ಎಂದರು.

ನೂತನ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಮಾತನಾಡಿ, ಒಳ್ಳೆಯ ಕೆಲಸ ಮಾಡಿದರೆ ಯಾವ ರೀತಿ ಜನರ ಪ್ರೀತಿ ಸಿಗುತ್ತದೆ ಎನ್ನುವುದಕ್ಕೆ ಫೌಜಿಯಾ ಅವರೇ ಸಾಕ್ಷಿ. ಆಡಳಿತದ ಮೇಲೆ ಜನರ ಆಶೋತ್ತರ, ನಿರೀಕ್ಷೆ ಬಹಳಷ್ಟಿರುತ್ತವೆ. ಅದಕ್ಕೆ ತಕ್ಕಂತೆ ಜನಸ್ನೇಹಿ ಆಡಳಿತ ನೀಡಲು ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಕೋರಿದರು.

ಅಬಕಾರಿ ಉಪ ಆಯುಕ್ತ ಸಂಗನಗೌಡ, ಜಿಲ್ಲಾ‌ ಕಾರ್ಮಿಕ ಅಧಿಕಾರಿ ಶರಣಪ್ಪ ಹಳಿಮನಿ, ತಹಸೀಲ್ದಾರ್‌ ಕೆ.ಆನಂದಶೀಲ ಮಾತನಾಡಿದರು.

ಫೌಜಿಯಾ ತರನ್ನುಮ್‌ ಅವರನ್ನು ಅಧಿಕಾರಿಗಳು-ಸಿಬ್ಬಂದಿ, ಸಂಘ-ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಸನ್ಮಾನಿಸಿದರು. ಜೊತೆಗೆ ನೂತನ ಜಿಲ್ಲಾಧಿಕಾರಿಗೆ ಸ್ವಾಗತ ಕೋರಿದರು.

ಮೇಯರ್‌ ವರ್ಷಾ ಜಾನೆ, ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ, ಎಸ್.ಪಿ ಅಡ್ಡೂರು ಶ್ರೀನಿವಾಸುಲು, ಜಿಲ್ಲಾ‌ ಪಂಚಾಯಿತಿ ಸಿಇಒ ಭಂವರ್‌ಸಿಂಗ್‌ ಮೀನಾ, ಪಾಲಿಕೆ ಅಯುಕ್ತ ಅವಿನಾಶ ಶಿಂಧೆ, ಡಿಸಿಎಫ್‌ ಸುಮಿತ್ ಪಾಟೀಲ, ಉಪವಿಭಾಗಾಧಿಕಾರಿಗಳಾದ ಸಾಹಿತ್ಯ ಆಲದಕಟ್ಟಿ, ಪ್ರಭುರೆಡ್ಡಿ, ಪಾಲಿಕೆಯ ಅಭಿವೃದ್ಧಿ ವಿಭಾಗದ ಉಪ ಆಯುಕ್ತೆ ಪ್ರಮೀಳಾ ಎಂ.ಕೆ, ಜಂಟಿ ಕೃಷಿ ನಿರ್ದೇಶಕ‌ ಸಮದ್ ಪಟೇಲ್ ಉಪಸ್ಥಿತರಿದ್ದರು.

ವಾಣಿಶ್ರೀ ಸುದೀಪ್‌ ನಿರೂಪಿಸಿದರು.

ಬೆಸ್ಟ್ ಅಧಿಕಾರಿಯನ್ನಾಗಿಸಿದ ಕಲಬುರಗಿ

2023ರ ಜೂನ್‌ನಿಂದ ಮೂರು ವರ್ಷ ಕಲಬುರಗಿಯಲ್ಲಿ‌ ಸಲ್ಲಿಸಿದ ಸೇವೆ ತೃಪ್ತಿ ನೀಡಿದೆ. ನನ್ನನ್ನು ಬೆಸ್ಟ್‌ ಅಧಿಕಾರಿಯನ್ನಾಗಿಸಿದ ಜಿಲ್ಲೆಯನ್ನು ಎಂದಿಗೂ ಮರೆಯುವುದಿಲ್ಲ’ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

‘ಪ್ರತಿಯೊಂದು ಇಲಾಖೆಯಲ್ಲಿ ಕೆಲಸಗಳಾಗಿವೆ. ಪ್ರತಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ನನ್ನೊಂದಿಗೆ ಸೈನಿಕರಂತೆ ನಿಂತು, ತಂಡವಾಗಿ ಕೆಲಸ ಮಾಡಿದ್ದಾರೆ. ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರ ಸಹಕಾರದಿಂದ ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಸಾಧ್ಯವಾಗಿದೆ. ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್‌ ಕಮಿಷನರ್, ಎಸ್.ಪಿ ಅವರ ಸಹಕಾರ ತುಂಬಾ ಇದೆ’ ಎಂದು ಕೃತಜ್ಞತಾಭಾವದಿಂದ ನುಡಿದರು.

‘ಜಿಲ್ಲೆಯ ರೈತರಿಗೆ 2,591 ರೂ ಕೋಟಿ ಬೆಳೆ ವಿಮೆ, ಬರ ಪರಿಹಾರ ದೊರೆತಿದೆ. ಕೆಸರಟಗಿಯಲ್ಲಿ 320 ಬಡವರಿಗೆ, ಅಂಗವಿಕಲರಿಗೆ ಮನೆ ಕೊಡಿಸಿದ ಹೆಮ್ಮೆ ಇದೆ. ಕಲಬುರಗಿ ರೊಟ್ಟಿ ವಿದೇಶಕ್ಕೆ ಲಗ್ಗೆ ಇಟ್ಟಿದೆ. ಇ–ಆಫೀಸ್‌ ಅನುಷ್ಠಾನವಾಗಿದೆ’ ಎಂದು ಸ್ಮರಿಸಿದರು. ನೂತನ ಜಿಲ್ಲಾಧಿಕಾರಿಗೂ ಸಹಕಾರ ನೀಡುವಂತೆ ಅವರು ಕೋರಿದರು.

ತದನಂತರ ಫೌಜಿಯಾ ತರನ್ನುಮ್ ಅವರನ್ನು ತೆರೆದ ಕಾರಿನಲ್ಲಿ ಮೆರವಣಿಗೆ ಮೂಲಕ ರಂಗಮಂದಿರದಿಂದ ಮನೆಯವರಿಗೆ ಬೀಳ್ಕೊಡಲಾಯಿತು.

Leave a Reply

Your email address will not be published. Required fields are marked *