ಸುದ್ದಿ ಸಂಗ್ರಹ ಚಿಕ್ಕಬಳ್ಳಾಪುರ
ಪ್ರೀತಿ ಕುರುಡು ಎಂಬ ಮಾತಿಗೆ ಸಾಕ್ಷಿಯೆಂಬಂತೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಕ್ತಸಂಬಂಧದ ಮನ್ನಣೆಯನ್ನೆ ಮರೆತು ಅಕ್ಕ-ತಮ್ಮ ಹಸೆಮಣೆ ಏರಿರುವ ವಿಲಕ್ಷಣ ಘಟನೆ ನಡೆದಿದೆ.
ವರಸೆಯಲ್ಲಿ ಅಕ್ಕ-ತಮ್ಮನಾಗಬೇಕಿದ್ದ ಜೋಡಿ ಈಗ ಸಪ್ತಪದಿ ತುಳಿಯುವ ಮೂಲಕ ಸಾಮಾಜಿಕ ಚರ್ಚೆಗೆ ಗ್ರಾಸವಾಗಿದ್ದಾರೆ.
ದೇವನಹಳ್ಳಿಯ ಸಾವಕನಹಳ್ಳಿ ಮೂಲದ ಶಶಿಕಲಾ ಮತ್ತು ಹೊಸಕೋಟೆಯ ಪ್ರವೀಣ್ ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದರು. ವಿಶೇಷವೆಂದರೆ, ಇವರಿಬ್ಬರ ತಾಯಂದಿರು ಸ್ವಂತ ಅಕ್ಕ-ತಂಗಿಯರು. ಅಂದರೆ ವರಸೆಯಲ್ಲಿ ಶಶಿಕಲಾ ಮತ್ತು ಪ್ರವೀಣ್ ಅಕ್ಕ-ತಮ್ಮನಾಗಬೇಕು. ಆದರೆ ಈ ಸಂಬಂಧದ ಗಡಿಯನ್ನು ಮೀರಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು.
ಶಶಿಕಲಾಗೆ ಪೋಷಕರು ಬೇರೊಬ್ಬ ಯುವಕನ ಜೊತೆ ಮದುವೆಗೆ ನಿಶ್ಚಯಿಸಿ, ಲಗ್ನ ಪತ್ರಿಕೆಯನ್ನೂ ಹಂಚಿದ್ದರು. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಶಶಿಕಲಾ ತನ್ನ ಪ್ರಿಯಕರ ಪ್ರವೀಣ್ ಜೊತೆ ಪರಾರಿಯಾಗಿದ್ದಳು. ನಂತರ ಇಬ್ಬರು ಅಂಗಟ್ಟದ ಶಿವನ ಗುಡಿಯಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.
ಮದುವೆಯ ನಂತರ ಪೋಷಕರಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿರುವ ನವಜೋಡಿ, ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಧಾವಿಸಿದ್ದಾರೆ. ಈ ವೇಳೆ ಕಚೇರಿ ಆವರಣದಲ್ಲಿ ಹೈಡ್ರಾಮಾ ನಡೆದಿದ್ದು, ಮಗಳ ಮದುವೆಯನ್ನು ಕಂಡು ತಾಯಿ ಆಕ್ರಂದನ ಮುಗಿಲು ಮುಟ್ಟಿತ್ತು. ಅಕ್ಕನ ಮಗಳಾಗಿ ತಮ್ಮನನ್ನೆ ಮದುವೆಯಾಗಿದ್ದಿಯಲ್ಲಾ, ಈ ಸಂಬಂಧ ಸಮಾಜ ಒಪ್ಪುತ್ತದೆಯೆ ? ಎಂದು ತಾಯಿ ಮಗಳನ್ನು ಪ್ರಶ್ನಿಸಿ ಕಣ್ಣೀರಿಟ್ಟರು.
ಆದರೆ ಯಾವುದಕ್ಕೂ ಮಣಿಯದ ಶಶಿಕಲಾ, ನನಗೆ ಪ್ರಿಯಕರನೆ ಸರ್ವಸ್ವ, ನಾನು ಪೋಷಕರ ಜೊತೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಪ್ರಸ್ತುತ ಈ ವಿಲಕ್ಷಣ ಮದುವೆ ಪ್ರಕರಣ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.