ಕಲಬುರಗಿ: ರಸ್ತೆ ಸಂಚಾರ ನಿಯಮಗಳು ಉಲ್ಲಂಘಿಸಿದ್ದ ಆಟೊವೊಂದಕ್ಕೆ ಕಲಬುರಗಿ ಸಂಚಾರ ಠಾಣೆ-2 ಪೊಲೀಸರು ಬರೋಬ್ಬರಿ 23,400 ದಂಡ ವಿಧಿಸಿದ್ದಾರೆ. ಅಲ್ಲದೆ ಆಟೊವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಸೇಡಂ ರಿಂಗ್ ರಸ್ತೆಯಿಂದ ಹಾಗರಗಾ ಕಡೆ ಹೊರಟಿದ್ದ ಆಟೊವನ್ನು ತಡೆದ ಪೊಲೀಸರು ಅದರ ನೋಂದಣಿ ಸಂಖ್ಯೆ ಬಳಸಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪರೀಕ್ಷಿಸಿದ್ದಾರೆ. ಬರೋಬ್ಬರಿ 44 ಉಲ್ಲಂಘನೆಗಳು ಕಂಡು ಬಂದಿವೆ. ಅದರ ರಸೀದಿ ಮುದ್ರಿಸಿದರೆ 10 ಅಡಿಗೂ ಉದ್ದದ ರಸೀದಿ ಬಂದಿದೆ.
ಎಂದಿನಂತೆ ವಾಹನಗಳು ತಡೆದು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಪರಿಶೀಲಿಸುತ್ತಿದ್ದೆವು. ಆಗ ಬಂದ ಅಟೊವನ್ನು ಸಹಜವಾಗಿ ಪರಿಶೀಲಿಸಿದಾಗ ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ವಲಯದಲ್ಲಿ ನಿಲುಗಡೆ ಮಾಡಿರುವುದು, ಆಟೊ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ ಸೇರಿದಂತೆ ಹಲವು ಬಗೆಯ ನಿಯಮ ಉಲ್ಲಂಘನೆಯ 44 ಪ್ರಕರಣಗಳಿದ್ದವು. ಶಹಾಬಾದ್ ಪಟ್ಟಣದ ಬಸವೇಶ್ವರ ನಗರದ ನಿವಾಸಿಯೊಬ್ಬರಿಗೆ ಸೇರಿದ ಆಟೊ ಇದಾಗಿದ್ದು, ದಂಡ ವಿಧಿಸಿ, ಆಟೊ ಜಪ್ತಿ ಮಾಡಲಾಗಿದೆ ಎಂದು ಸಂಚಾರ ವಿಭಾಗದ ಪಿಎಸ್‌ಐ ಅನಿಲ್ ಜೈನ್ ತಿಳಿಸಿದ್ದಾರೆ.