ಸುದ್ದಿ ಸಂಗ್ರಹ ಶಹಾಬಾದ್
ತಾಲೂಕಿನ ಮುಗಳನಾಗಾವಿ ಕಟ್ಟಿಮನಿ ಸಂಸ್ಥಾನ ಹಿರೇಮಠದಲ್ಲಿ ಮೇ 2ರಂದು ಶ್ರೀ ಗುರು ನಿಜಲಿಂಗೈಕ್ಯ ಸಿದ್ಧಲಿಂಗ ಶಿವಯೋಗಿಗಳ 77ನೇ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಮಠದ ಪೀಠಾಧಿಪತಿ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ತಿಳಿಸಿದರು.
ಜಾತ್ರೆ ನಿಮಿತ್ತ ಬೆಳಗ್ಗೆ ಸಿದ್ಧಲಿಂಗ ಶಿವಯೋಗಿಗಳ ವಿಶೇಷ ಪೂಜೆ, ನಿತ್ಯ ಅಲಂಕಾರ ಪೂಜೆ ಜರುಗಲಿದೆ. ಸಂಜೆ ಗುರು ಸಿದ್ಧಲಿಂಗ ಶಿವಯೋಗಿಗಳ ಮಹಾಪುರಾಣ, ಸಂಗೀತ ಕಾರ್ಯಕ್ರಮ ನಿತ್ಯ ರಾತ್ರಿ 8ರಿಂದ 10ಗಂಟೆಯವರೆಗೆ ನಡೆಯುತ್ತಿದೆ.
ಮೇ.1ರಂದು ಬೆಳಗ್ಗೆ ಪೂಜ್ಯ ಮರುಳಸಿದ್ದ ಶಿವಾಚಾರ್ಯರ ಹಸ್ತದಿಂದ ಅಯ್ಯಾಚಾರ, ಲಿಂಗದೀಕ್ಷೆ ನೆರವೇರಲಿದೆ. ಮಧ್ಯಾಹ್ನ ಗ್ರಾಮದ ಪ್ರಮುಖ ರಸ್ತೆಯ ಮೂಲಕ ಸಕಲ ವಾದ್ಯ ವೈಭವದೊಂದಿಗೆ ಪಲ್ಲಕ್ಕಿ ಉತ್ಸವ ಜರುಗಲಿದೆ. ಮೇ 2ರಂದು ಸಂಜೆ 6.45ಕ್ಕೆ ಮಹಾರಥೋತ್ಸವ ಅತ್ಯಂತ ವೈಭವದಿಂದ ಸಾವಿರಾರು ಭಕ್ತರ ಮಧ್ಯ ನಡೆಯಲಿದೆ. ರಥೋತ್ಸವ ನಂತರ ಪ್ರಸಾದ ವ್ಯವಸ್ಥೆ ನಡೆಯಲಿದೆ.
ನಾಟಕ: ಮೇ 2ರಂದು ರಾತ್ರಿ 10.15ಕ್ಕೆ ಶ್ರೀ ಗುರು ಸಿದ್ಧಲಿಂಗೇಶ್ವರ ನಾಟ್ಯ ಸಂಘದಿಂದ ‘ಮಾತು ಬಿದ್ದಿತ್ತು ಮೌನ ಗೆದ್ದಿತ್ತು’ ಅರ್ಥಾತ್ ನನ್ನ ಗಂಡ ನೀ ಹೌದು ನಿನ್ನ ಹೆಂಡತಿ ನಾನಲ್ಲ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಕುಸ್ತಿ ಪಂದ್ಯಾವಳಿ: ಮೇ 3ರಂದು ಬೆಳಗ್ಗೆ 7.45ಕ್ಕೆ ಸುತ್ತಲಿನ ಗ್ರಾಮಗಳ ಪೈಲ್ವಾನರಿಂದ ಜಂಗಿ ಕುಸ್ತಿ ಪಂದ್ಯಗಳು ನಡೆಯಲಿವೆ. ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ದಿವ್ಯ ಸಾನ್ನಿಧ್ಯವನ್ನು ಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ನಾಡಿನ ನಾನಾ ಮಠಾಧೀಶರು, ಶಾಸಕರು, ರಾಜಕೀಯ ಮುಖಂಡರು, ನಾನಾ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಗುರುಸಿದ್ಧಲಿಂಗ ಶಿವಯೋಗಿಗಳ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಸಮಿತಿಯವರು ತಿಳಿಸಿದ್ದಾರೆ.