ರಾಷ್ಟ್ರದ ಅಭಿವೃದ್ಧಿಗೆ ರೈಲು ಸಾರಿಗೆಯ ಕೊಡುಗೆ ಅನನ್ಯ: ಎಚ್.ಬಿ ಪಾಟೀಲ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿ, ವ್ಯಾಪಾರ-ವ್ಯವಹಾರಗಳ ವಿಸ್ತರಣೆ, ಉದ್ಯೋಗಾವಕಾಶಗಳ ಹೆಚ್ಚಳ, ಸರ್ಕಾರಕ್ಕೆ ಆದಾಯ, ಪ್ರವಾಸೋದ್ಯಮಕ್ಕೆ ಉತ್ತೇಜನ ಸೇರಿದಂತೆ ಮುಂತಾದ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾಗಿ ಸೇವೆ ಸಲ್ಲಿಸುವ ಮೂಲಕ ರೈಲು ಸಾರಿಗೆಯು ರಾಷ್ಟ್ರದ ಅಭಿವೃದ್ಧಿಗೆ ತನ್ನದೆಯಾದ ಅನನ್ಯ ಕೊಡುಗೆ ನೀಡುತ್ತಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಬಳಿಯಿರುವ ರಿಪಬ್ಲಿಕ್ ಇಂಗ್ಲೀಷ್ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಭಾರತೀಯ ರೈಲು ಸಾರಿಗೆ ಪ್ರಾರಭೋತ್ಸವದ 173ನೇ ವರ್ಷಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ನೂರಾರು ವರ್ಷಗಳಿಂದ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಸಂಚಾರ ಮತ್ತು ಸರಕುಗಳ ಸಾಗಾಣಿಕೆಯ ಸೇವೆಯ ಮೂಲಕ ಭಾರತೀಯ ರೈಲು ಸಾಕಷ್ಟು ಅನಕೂಲವಾಗಿದೆ ಎಂದರು.

ನಮ್ಮ ದೇಶದಲ್ಲಿ 1853ರ ಏ.16ರಂದು ಮುಂಬೈ-ಥಾಣಾ ನಡುವೆ 34 ಕಿ.ಮೀ. ದೂರ ರೈಲು ಸಂಚರಿಸುವ ಮೂಲಕ ಅಧಿಕೃತವಾಗಿ ನಮ್ಮ ದೇಶದಲ್ಲಿ ರೈಲು ಸಾರಿಗೆ ಪ್ರಾರಂಭವಾಯಿತು. ಇಂದು ಭಾರತದ ರೈಲ್ವೆ ಏಷ್ಯಾ ಖಂಡದಲ್ಲೆ ಅತ್ಯಂತ ದೊಡ್ಡದು ಹಾಗೂ ಜಗತ್ತಿನಲ್ಲಿ ನಾಲ್ಕನೇ ಅತಿದೊಡ್ಡ ರೈಲ್ವೆ ಸಂಪರ್ಕ ಜಾಲವಾಗಿದೆ. ದೇಶದ ಅತ್ಯಂತ ದೊಡ್ಡ ಸಾರ್ವಜನಿಕ ಉದ್ಯಮವೂ ಆಗಿದೆ. ರೈಲ್ವೆ ಸೇವೆಯ ಖಾಸಗೀಕರಣ, ಏಕ ಗೇಜ್ ವ್ಯವಸ್ಥೆಯ ಜಾರಿ, ಕಂಪ್ಯೂಟರೀಕರಣ, ವಿದ್ಯುತ್ ಮತ್ತು ಡೀಸೆಲ್ ಇಂಜಿನ್‌ಗಳ ಬಳಕೆ, ಪ್ರಯಾಣಿಕರ ಸೌಲಭ್ಯಗಳ ಉನ್ನತೀಕರಣ, ತಂತ್ರಜ್ಞಾನ ಆಧುನೀಕರಣ, ರೈಲು ಸುರಕ್ಷತಾ ಕ್ರಮಗಳ ಜಾರಿ ಸೇರಿದಂತೆ ಅನೇಕ ಸುಧಾರಣೆ ಕ್ರಮಗಳನ್ನು ರೈಲ್ವೆ ಸಾರಿಗೆ ಸುಧಾರಣೆಗಾಗಿ ಜಾರಿಗೆ ತರಲಾಗಿದೆ. ರೈಲ್ವೆಯು ಜನಸಾಮಾನ್ಯರಿಗೆ ಒಂದು ವರದಾನವಾಗಿದೆ. ಅದು ರಾಷ್ಟ್ರದ ನರನಾಡಿಯಂತೆ ಕಾರ್ಯನಿರ್ವಹಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ ಮತ್ತು ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *