ಮಂತ್ರಾಲಯ ರಾಯರ ಮಠಕ್ಕೆ ಮಂಜೂರಾದ ಜಾಗದ ಸರ್ವೆಗೆ ಭಾರಿ ವಿರೋಧ: ಹಲವರು ವಶಕ್ಕೆ

ಜಿಲ್ಲೆ

ಸುದ್ದಿ ಸಂಗ್ರಹ ರಾಯಚೂರು
ಬಿಚ್ಚಾಲಿ ಗ್ರಾಮದಲ್ಲಿನ ರಾಘವೇಂದ್ರ ಸ್ವಾಮಿಗಳ ಏಕಶಿಲಾ ವೃಂದಾವನದ ಪಕ್ಕದ ಭೂಮಿ ವಿವಾದ ಹಿನ್ನೆಲೆ ಅಧಿಕಾರಿಗಳು ಸರ್ವೆ ನಡೆಸಿದ್ದಾರೆ. ಈ ವೇಳೆ ಸರ್ವೆಗೆ ವಿರೋಧಿಸಿ ಹೋರಾಟ ನಡೆಸಿದ ಗ್ರಾಮಸ್ಥರು, ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನ್ಯಾಯಾಲಯದ ಸೂಚನೆಯಂತೆ ಗ್ರಾಮದ 2 ಎಕರೆ 33 ಗುಂಟೆ ಜಾಗದ ಸರ್ವೆಗೆ ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು, ಅರ್ಚಕರು, ಸಾಗುವಳಿ ಮಾಡುತ್ತಿರುವ ರೈತರು ವಿರೋಧ ವ್ಯಕ್ತಪಡಿಸಿ ಹೋರಾಟ ಮಾಡಿದರು. ಮಂತ್ರಾಲಯ ಮಠ ರಾಘವೇಂದ್ರ ಸ್ವಾಮಿಗಳ ಚಾರಿತ್ರಿಕ ಸ್ಥಳಗಳ ಅಭಿವೃದ್ಧಿಗಾಗಿ ಜಮೀನು ಮಂಜೂರಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಅದರಂತೆ ಸರ್ಕಾರ 2 ಎಕರೆ 33 ಗುಂಟೆ ಜಮೀನು ಮಂಜೂರು ಮಾಡಿತ್ತು. ಇದರಿಂದ ಜಪದ ಕಟ್ಟೆ ಬಿಚ್ಚಾಲಿ ಅಪ್ಪಣ್ಣಾಚಾರ್ಯ ಸೇವಾ ಟ್ರಸ್ಟ್ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯ ಅರ್ಜಿ ವಜಾಗೊಳಿಸಿದ್ದರಿಂದ ಕೋರ್ಟ್ ಸೂಚನೆಯಂತೆ ಅಧಿಕಾರಿಗಳು ಸ್ಥಳ ಸರ್ವೆ ಮಾಡಿ ಮಂತ್ರಾಲಯ ಮಠಕ್ಕೆ ನೀಡಲು ಮುಂದಾಗಿದ್ದಾರೆ. ಈ ವೇಳೆ, ನಮಗೆ ನೋಟಿಸ್ ಕೊಡದೆ ಸರ್ವೆ ಮಾಡಲು ಬಂದಿದ್ದಾರೆ ಎಂದು ಸಾಗುವಳಿದಾರರು, ಗ್ರಾಮಸ್ಥರು, ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಸುಮಾರು ವರ್ಷಗಳಿಂದ ಗ್ರಾಮದ ಕೆಲ ರೈತರು ಈ ಜಮೀನು ಸಾಗುವಳಿ ಮಾಡುತ್ತಿದ್ದಾರೆ. ಇಲ್ಲಿನ ಜಪದ ಕಟ್ಟೆ ಟ್ರಸ್ಟ್ ಏಕಶಿಲಾ ವೃಂದಾವನ ಸ್ಥಳದಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ. ಆದರೆ ಮಂತ್ರಾಲಯ ಮಠಕ್ಕೆ ಜಮೀನು ಮಂಜೂರು ಆಗಿದ್ದರಿಂದ ಅಧಿಕಾರಿಗಳು ಸರ್ವೆ ಕಾರ್ಯಕ್ಕೆ ಮುಂದಾಗಿದ್ದಾರೆ.

ಬಿಚ್ಚಾಲಿಯಲ್ಲಿನ ರಾಘವೇಂದ್ರ ಸ್ವಾಮಿ ಏಕಶಿಲಾ ವೃಂದಾವನ ದರ್ಶನ ಇಂದು (ಏ.13) ಬಂದ್ ಮಾಡಲಾಗಿತ್ತು. ಬಳಿಕ ಪೊಲೀಸರ ಸರ್ಪಗಾವಲಿನಲ್ಲಿ ಅಧಿಕಾರಿಗಳಿಂದ ಜಾಗದ ಸರ್ವೆ ಕಾರ್ಯ ಮಾಡಲಾಗಿದೆ. ವಿರೋಧ ವ್ಯಕ್ತಪಡಿಸಿದ ಮಹಿಳೆಯರು ಸೇರಿ ರೈತರು , ಗ್ರಾಮಸ್ಥರನ್ನು ವಶಕ್ಕೆ ಪಡೆದು ಯರಗೇರಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಏಕಶಿಲಾ ವೃಂದಾವನ ಸುತ್ತಮುತ್ತಲಿನ ಅಂಗಡಿಗಳನ್ನು ಬಂದ್ ಮಾಡಲಾಗಿದ್ದು, ತೆರವಿಗೆ ಮುಂದೆ ನಿಯಮಗಳ ಪ್ರಕಾರ ನೋಟಿಸ್ ಕೊಡಲಾಗುವುದು ಎಂದು ರಾಯಚೂರು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *