ಜಲ ಸಂರಕ್ಷಣೆ ರಾಷ್ಟ್ರೀಯ ಆಂದೋಲನ, ಪ್ರತ್ಯೇಕ ಪಠ್ಯವಾಗಲಿ: ಎಚ್.ಬಿ ಪಾಟೀಲ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಜಲ ಸಂರಕ್ಷಣೆಯ ಕಾರ್ಯ ರಾಷ್ಟ್ರೀಯ ಆಂದೋಲನದ ರೂಪದಲ್ಲಿ ಜರುಗುವುದರ ಜೊತೆಗೆ ಪ್ರತ್ಯೇಕ ಪಠ್ಯವಾಗಬೇಕಾಗಿದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ ಪಾಟೀಲ ಮಾರ್ಮಿಕವಾಗಿ ಹೇಳಿದರು.

ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್‌ನ ರಿಪಬ್ಲಿಕ್ ಇಂಗ್ಲೀಷ್ ಸಂವಹನ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ಜಲ ದಿನಾಚರಣೆ’ಯಲ್ಲಿ ಜಲ ಸಂರಕ್ಷಣೆ ಜಾಗೃತಿಯ ಕರಪತ್ರ ವಿತರಿಸಿ, ಮಾತನಾಡಿದ ಅವರು, ಜಲ ಎಂಬುದು ಕೇವಲ ಎರಡು ಅಕ್ಷರದ ಶಬ್ದವಲ್ಲ, ಅದು ಸಕಲ ಜೀವಿಗಳ ಉಸಿರು ಅಸ್ತಿತ್ವಕ್ಕೆ ಕಾರಣವಾಗಿದೆ. ವಿವಿಧ ಕಾರಣಗಳಿಂದ ಜಲ ಸಂಪತ್ತಿನ ಕೊರತೆಯಾಗುವುದರ ಜೊತೆಗೆ ಪರಿಸರ ಅಸಮತೋಲನವಾಗುತ್ತಿದೆ. ಜಲ ಸಂರಕ್ಷಣೆ ಸರ್ಕಾರ, ಕೆಲವು ವ್ಯಕ್ತಿಗಳ, ಸಂಘ-ಸಂಸ್ಥೆಗಳ ಜವಾಬ್ದಾರಿಯಾಗಿರದೆ, ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.

ಜಲಸಂಪತ್ತು ಹಾಳಾಗದಂತೆ ತಡೆದು, ಅದನ್ನು ಮುಂದಿನ ಪೀಳಿಗೆಗೆ ಲಭ್ಯವಾಗುವಂತೆ ಮಾಡಬೇಕಾಗಿದೆ. ಭೂಮಂಡಲದಲ್ಲಿ ಒಟ್ಟು ಬಳಕೆಗೆ ಲಭ್ಯತೆಯ ನೀರಿನ ಪ್ರಮಾಣ ತುಂಬಾ ಕಡಿಮೆಯಿದ್ದು, ಅದರ ಸದ್ಬಳಕೆಯಾಗಬೇಕು. ಅರಣ್ಯನಾಶ, ಅತಿಯಾದ ಅಂತರ್ಜಲ ಬಳಕೆ, ಪರಿಸರ ಮಾಲಿನ್ಯ, ಅವೈಜ್ಞಾನಿಕ ನೀರಿನ ಬಳಕೆ, ಮಾನವನ ದುರಾಸೆಯಂತಹ ಮುಂತಾದ ಕಾರಣಗಳಿಂದ ಇದು ಬರಿದಾಗುತ್ತಿದ್ದು, ಇದು ಹೀಗೆ ಮುಂದುವರೆದರೆ ಕೆಲವು ವರ್ಷಗಳಲ್ಲಿ ‘ನೀರಿಗಾಗಿ ಮೂರನೇ ವಿಶ್ವಯುದ್ಧ’ ಜರುಗಿದರೆ ಆಶ್ವರ್ಯಪಡಬೇಕಾಗಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಾ, ಎಲ್ಲರು ನೀರಿನ ಸಂರಕ್ಷಣೆ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಸಮಾಜ ಸೇವಕ ಸೋಮಶೇಖರ ಹಿಪರಗಿ, ರವೀಂದ್ರ ಶಿವಣಗಿ, ಸಾಯಿರಾಮ ಠಾಕೋರ್ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *