ಸುದ್ದಿ ಸಂಗ್ರಹ ಚಿತ್ತಾಪುರ
ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಜ.12 ರಂದು ಪಟ್ಟಣಕ್ಕೆ ಆಗಮಿಸುತ್ತಿದ್ದು. ಬುಧವಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದ ಸ್ಥಳಕ್ಕೆ ಭೇಟಿಯಾಗಿ ಪರಿಶೀಲಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್’ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರ್ ಶ್ರೀನಿವಾಸಲು ಅವರು ಕಾರ್ಯಕ್ರಮ ಆಯೋಜನೆ ಮಾಡಲು ಉದ್ದೇಶಿಸಿರುವ ಪಟ್ಟಣದ ಕಡೆಚೂರು ಮೈದಾನ ಪರಿಶೀಲನೆ ಮಾಡಿದರು. ವೇದಿಕೆ ನಿರ್ಮಾಣ, ಶಾಮೀಯಾನ, ಪೊಲೀಸ್ ಬ್ಯಾರಿಕೇಡ್, ಪಾರ್ಕಿಂಗ್ ಸ್ಥಳಗಳ ಹಾಗೂ ಹೆಲಿಕಾಪ್ಟರ್ ಇಳಿಸುವ ಕ್ರೀಡಾಂಗಣದ ಮಾಹಿತಿ ಪಡೆದು ಪರಿಶೀಲಿಸಿದರು.
ಕಾರ್ಯಕ್ರಮಕ್ಕೆ ಯಾವುದೆ ರೀತಿಯ ಅಡಚಣೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಜನರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೇಡಂ ಉಪ ವಿಭಾಗಾಧಿಕಾರಿ ಪ್ರಭುರೆಡ್ಡಿ, ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸೂಚಿಸಿದರು.
ಡಿವೈಎಸ್‌ಪಿ ಶಂಕರಗೌಡ ಪಾಟೀಲ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹ್ಮದ್ ಅಕ್ರಂ ಪಾಷಾ, ಬಿಇಒ ಶಶಿಧರ್ ಬಿರಾದಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರತಿ ತುಪ್ಪದ್, ಗ್ರೇಡ್-2 ತಹಶೀಲ್ದಾರ್ ರಾಜಕುಮಾರ ಮರತೂರಕರ್, ಪಿಎಸ್‌ಐ ಮಂಜುನಾಥ ರೆಡ್ಡಿ, ವಾಡಿ ಪಿಎಸ್‌ಐ ತಿರುಮಲೇಶ, ಲೋಕೋಪಯೋಗಿ ಇಲಾಖೆ ಎಇಇ ಮಹ್ಮದ್ ಸಲೀಂ, ಅಗ್ನಿಶಾಮಕ ಅಧಿಕಾರಿ ನಾಗರಾಜ, ಕಾಂಗ್ರೆಸ್ ಮುಖಂಡ ನಾಗರೆಡ್ಡಿ ಪಾಟೀಲ ಕರದಾಳ, ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೆಮೂದ್ ಸಾಹೇಬ್, ಮುಖಂಡರಾದ ಸಾಹೇಬ್, ಚಂದ್ರಶೇಖರ ಕಾಶಿ, ಮುಕ್ತಾರ್ ಪಟೇಲ್, ನಾಗಯ್ಯ ಗುತ್ತೇದಾರ ಇದ್ದರು.