ನವದೆಹಲಿ: ವಿವಾಹವಾಗಿ ತನ್ನ ಪತಿಯ ಮನೆಗೆ ತಲುಪಿದ ಕೇವಲ 20 ನಿಮಿಷಗಳಲ್ಲೆ ವಧು ವಿಚ್ಛೇದನ ಕೇಳಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ.
ನವೆಂಬರ್ 25 ರಂದು ಭಾಲ್ವಾನಿಯ ವಿಶಾಲ್ ಮಧೇಶಿಯಾ ಮತ್ತು ಸಲೇಂಪುರದ ಪೂಜಾ ಅವರ ಮದುವೆ ನಡೆದಿತ್ತು.
ಸಂಜೆ 7 ಗಂಟೆಗೆ ವರನ ಮೆರವಣಿಗೆ ವಧುವಿನ ಮನೆ ತಲುಪಿ, ರಾತ್ರಿಯಿಡಿ ವಿವಾಹದ ಎಲ್ಲಾ ಆಚರಣೆಗಳು ಮುಗಿದಿದ್ದವು. ನಂತರ ವಧು ಪೂಜಾ ಗಂಡನ ಮನೆ ಹೋಗಿದ್ದಾಳೆ.
ಆದರೆ ಗಂಡನ ಮನೆಯೊಳಗೆ ಕಾಲಿಟ್ಟ 20 ನಿಮಿಷಗಳಲ್ಲೆ ನವ ವಧು ಪೂಜಾ ಹೊರಬಂದು, “ನಾನು ನನ್ನ ಪತಿಯೊಂದಿಗೆ ಇರುವುದಿಲ್ಲ” ಎಂದು ಕುಟುಂಬದ ಸದಸ್ಯರು ಹಾಗೂ ಅತಿಥಿಗಳ ಮುಂದೆ ಹೇಳಿದ್ದಾಳೆ. ಆಕೆಯ ಈ ನಿರ್ಧಾರಕ್ಕೆ ಕಾರಣವೇನು ಎಂದು ಕೇಳಿದರೂ, ಆಕೆ ಮೌನ ಮುರಿಯದೆ “ನನ್ನ ಹೆತ್ತವರನ್ನು ಕರೆಯಿರಿ. ನಾನು ಇಲ್ಲಿ ಇರುವುದಿಲ್ಲ” ಎಂದು ಹೇಳಿದ್ದಾಳೆ.
ವಧುವಿನ ಕುಟುಂಬಸ್ಥರು ಎಷ್ಟೆ ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಪೂಜಾ ತನ್ನ ನಿರ್ಧಾರ ಬದಲಿಸಲಿಲ್ಲ.
ಈ ವಿಷಯವಾಗಿ ನವೆಂಬರ್ 26 ರಂದು ಗ್ರಾಮದಲ್ಲಿ ಪಂಚಾಯತಿ ಕರೆಯಲಾಯಿತು. ಸುಮಾರು ಐದು ಗಂಟೆಗಳ ಕಾಲ ಚರ್ಚೆ ನಡೆದ ನಂತರ ಯಾವುದೆ ಸಂಧಾನ ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂಚಾಯತಿಯು ದಂಪತಿಗಳನ್ನು ಬೇರಾಗುವಂತೆ ಸಲಹೆ ನೀಡಿತು. ಪರಸ್ಪರ ಒಪ್ಪಿಗೆಯಿಂದ ವಿವಾಹವನ್ನು ಅಂತ್ಯಗೊಳಿಸಲಾಗಿದ್ದು, ಕುಟುಂಬಗಳು ವಿನಿಮಯ ಮಾಡಿಕೊಂಡಿದ್ದ ಉಡುಗೊರೆ ಮತ್ತು ಹಣವನ್ನು ಹಿಂತಿರುಗಿಸುವಂತೆ ಲಿಖಿತ ಒಪ್ಪಂದಕ್ಕೆ ಬರಲಾಯಿತು.
ಸಂಜೆ 6 ಗಂಟೆಗೆ ಪೂಜಾ ತನ್ನ ತಂದೆ-ತಾಯಿಯ ಮನೆಗೆ ಮರಳಿದಳು. ಮದುವೆಗೆ ಮುನ್ನ ಯಾವುದೆ ಅಸಮ್ಮತಿ ಸೂಚಿಸದೆ ಸಾಮಾನ್ಯವಾಗಿ ಮಾತನಾಡಿದ್ದ ಪೂಜಾ ಅವರ ಈ ನಿರ್ಧಾರದಿಂದ ಎರಡು ಕುಟುಂಬಗಳಿಗೆ ಮುಜುಗರ ಉಂಟಾಗಿದೆ ಎಂದು ವರ ವಿಶಾಲ್ ತಿಳಿಸಿದ್ದಾರೆ.
ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಕೆಲವರು “ಬ್ಲಿಂಕಿಟ್ ಮದುವೆ” ಎಂದು ಹಾಸ್ಯ ಮಾಡಿದ್ದಾರೆ.