ವಾಡಿ: ವಂದೆ ಮಾತರಂ ಗೀತೆಯ 150ನೇ ವರ್ಷಾಚರಣೆಯನ್ನು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮುಖಂಡರು ಭಾರತಾಂಬೆಗೆ ಪುಷ್ಪ ನಮನ ಸಲ್ಲಿಸಿ, ಸಾಮೂಹಿಕವಾಗಿ ವಂದೆ ಮಾತರಂ ಜಯ ಘೋಷ ಕೂಗಿ ಸಂಭ್ರಮಿಸಿದರು.
ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ವಂದೆ ಮಾತರಂ ಎಂಬುದು ಕೇವಲ ಒಂದು ದೇಶಭಕ್ತಿ ಗೀತೆಯಲ್ಲ, ಬದಲಿಗೆ ಅಂದಿನ ಬ್ರಿಟಿಷ್ ಆಡಳಿತದ ವಿರುದ್ಧ ಸಮಸ್ತ ಭಾರತೀಯರನ್ನು ಒಗ್ಗೂಡಿಸುವ ಒಂದು ಶಕ್ತಿಯ ಗೀತೆಯಾಗಿ ಪ್ರಚಲಿತಗೊಂಡಿತ್ತು. ಆಗಿನ ಪರಿಸ್ಥಿತಿಯಲ್ಲಿ ಜನರಿಗೆ ದೇಶ ಭಕ್ತಿ ಪರಿಕಲ್ಪನೆ ಇರಲಿಲ್ಲ. ಆಗ ರಚನೆಯಾದ ವಂದೆ ಮಾತರಂ ಗೀತೆಯ ಸಾಮೂಹಿಕ ಗಾಯನದಿಂದ ಜನರಲ್ಲಿ ದೇಶ ಪ್ರೇಮ, ಭಕ್ತಿ, ಭಾವನೆ ಹುಟ್ಟಿಕೊಳ್ಳಲು ಅನುಕೂಲವಾಯಿತು. ಭಾರತ ಮಾತೆಯ ಸಮೃದ್ಧತೆ ಮತ್ತು ವೈವಿಧ್ಯತೆಯನ್ನು ಸಮರ್ಥವಾಗಿ ಶತಮಾನಗಳ ಕಾಲ ಬಿಂಬಿಸುವ ಸಾಮರ್ಥ್ಯ ಈ ಗೀತೆ ಅಂದಿನಿಂದ ಇಂದಿನವರೆಗೂ ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಭೀಮಶಾ ಜೀರೊಳ್ಳಿ, ಹರಿ ಗಲಾಂಡೆ, ಶರಣಗೌಡ ಚಾಮನೂರ, ಭೀಮರಾವ ದೊರೆ, ಶಿವಶಂಕರ ಕಾಶೆಟ್ಟಿ, ಪ್ರಕಾಶ ಪುಜಾರಿ, ಕಿಶನ ಜಾಧವ, ಅಂಬದಾಸ ಜಾಧವ, ಸುಭಾಷ ರದ್ದೆವಾಡಿ ಚಾಮನೂರ, ಮಹೇಂದ್ರಕುಮಾರ ಪುಜಾರಿ, ಮಲ್ಲಿಕಾರ್ಜುನ ಸಾತಖೇಡ, ರವಿ ಚವ್ಹಾಣ, ಸೂರಜ್ ರಾಠೋಡ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ, ಉಮಾಭಾಯಿ ಗೌಳಿ ಸೇರಿದಂತೆ ಅನೇಕರು ಇದ್ದರು.