ಕಲಬುರಗಿ: ಮನುಷ್ಯನಲ್ಲಿ ಅಡಗಿರುವ ದ್ವೇಷ, ಅಸೂಯೆ, ಸ್ವಾರ್ಥತೆ, ಕೆಟ್ಟ ಆಲೋಚನೆಯಂಥಹ ಮುಂತಾದ ದುಷ್ಟ ಶಕ್ತಿಯ ಗುಣಗಳನ್ನು ನಾಶಪಡಿಸಿ, ಪರಸ್ಪರ ಪ್ರೀತಿ, ಸಹಬಾಳ್ವೆ, ಸಹಕಾರ, ಪರೋಪಕಾರದಂಥಹ ಶಿಷ್ಟತೆಯ ಗುಣಗಳು ಮೈಗೂಡಿಕೊಂಡು ಜೀವನ ಸಾಗಿಸಬೇಕೆಂಬ ಮೇರು ಸಂದೇಶ ವಿಜಯದಶಮಿ ಹೊಂದಿದೆ ಎಂದು ಚಿಂತಕ ಮಹಾದೇವಯ್ಯ ಕರದಳ್ಳಿ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್ ಎದುರುಗಡೆಯ ಶಾರದಾ ವಿವೇಕ ಮಹಿಳಾ ಪದವಿ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ‘ನಾಡಹಬ್ಬ ದಸರಾ ಸಂದೇಶ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ವಿಶ್ವದ ಸಂಸ್ಕೃತಿಯ ತಾಯಿ ರಾಷ್ಟ್ರವಾಗಿದೆ. ಅನೇಕ ಧರ್ಮಗಳು, ಜಾತಿಗಳು, ಭಾಷೆಗಳು, ಉಡುಗೆ ಹಾಗೂ ತೊಡುಗೆಗಳು ಕಂಡು ಬರುತ್ತವೆ. ಜಗತ್ತಿನಲ್ಲಿಯೇ ಮೇರು ಸಂಸ್ಕೃತಿ, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದಾಗಿದೆ. ಹಬ್ಬಗಳು ದೇಶದ ಸಂಸ್ಕೃತಿ, ಪರಂಪರೆಯನ್ನು ಹೆಚ್ಚಿಸುತ್ತವೆ. ಇಂತಹ ಹಬ್ಬಗಳ ಆಶಯವನ್ನು ಅರ್ಥಮಾಡಿಕೊಂಡು ಆಚರಿಸಿದರೆ ಹೆಚ್ಚಿನ ಮಹತ್ವ ಬರಲು ಸಾಧ್ಯ ಎಂದು ಮಾರ್ಮಿಕವಾಗಿ ಹೇಳಿದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿ, ಕರ್ನಾಟಕದಲ್ಲಿ ಈ ಹಬ್ಬವನ್ನು ‘ನಾಡಹಬ್ಬ’ವನ್ನಾಗಿ ಆಚರಿಸಲಾಗುತ್ತದೆ. ವಿಜಯನಗರ ಅರಸರು ಪ್ರಾರಂಭಿಸಿದ ನಂತರ ಮೈಸೂರು ಒಡೆಯರಿಂದ ವಿಶ್ವವಿಖ್ಯಾತಿ ಪಡೆಯಿತು. ನವರಾತ್ರಿಯು ಒಂಬತ್ತು ದಿವಸಗಳ ಕಾಲ ಉತ್ಸಾಹದಿಂದ ಆಚರಿಸುವ ಹಬ್ಬ ಇದಾಗಿದೆ. ಹಬ್ಬದ ದಿನದಂದು ಬನ್ನಿ ವಿನಿಮಯ ಮಾಡಿಕೊಂಡು ಪರಸ್ಪರ ಸಹಬಾಳ್ವೆಯಿಂದ ಬಂಗಾರದಂತಹ ಬೆಲೆಬಾಳುವ ವ್ಯಕ್ತಿತ್ವ ನಮ್ಮದಾಗಬೇಕು ಎಂಬುದು ಅದರ ಹಿನ್ನಲೆಯ ಆಶಯವಾಗಿದೆ. ಹನ್ನೆರಡನೇ ಶತಮಾನದಲ್ಲಿ ಜರುಗಿದ ಸಾಮಾಜಿಕ ನ್ಯಾಯಕ್ಕಾಗಿ ಕಲ್ಯಾಣ ಕ್ರಾಂತಿಯು ಶರಣರ ಮರಣವೇ ಮಹಾನವಮಿ ಸ್ಮರಣೆ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಹಣಮಂತರಾಯ ಗುಡ್ಡೇವಾಡಿ, ಉಪನ್ಯಾಸಕರಾದ ವನಜಾಕ್ಷಿ ಪಾಟೀಲ್, ಮಹೇಶಕುಮಾರ ಟಿ., ರೂಪಾ ಕುಂಬರ, ಭುವನೇಶ್ವರಿ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿ ಕಾವೇರಿ ನಿರೂಪಿಸಿ, ವಂದಿಸಿದಳು. ನಂತರ ದೇಶಭಕ್ತಿಯ ಘೋಷಣೆಗಳು ಮೊಳಗಿದವು. ಸ್ವದೇಶಿ ವಸ್ತುಗಳ ಬಳಕೆಯ ಪ್ರತಿಜ್ಞೆ ಸ್ವೀಕರಿಸಲಾಯಿತು.