ದುಬೈ: ಇಲ್ಲಿ ನಡೆದ ಏಷ್ಯಾ ಕಪ್ 2025 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಗೆದ್ದು ಬೀಗಿದೆ. ಟಾಸ್ ಸಮಯದಲ್ಲಿ ಮತ್ತು ಪಂದ್ಯದ ನಂತರ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪಾಕ್ ತಂಡದ ನಾಯಕ ಸಲ್ಮಾನ್ ಆಘಾ ಅವರನ್ನು ನಿರ್ಲಕ್ಷಿಸಿ, ಹ್ಯಾಂಡ್‌ಶೇಖ್ ಸಹ ಮಾಡಲಿಲ್ಲ. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಟೀಂ ಇಂಡಿಯಾ ನಾಯಕನ ದಿಟ್ಟತನದಿಂದ ಮುಜುಗರಕ್ಕೊಳಗಾದ ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೀದ್ ಅಖ್ತರ್ ಚೀಮಾ, ಭಾರತೀಯ ತಂಡದ ವಿರುದ್ಧ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ಮ್ಯಾಚ್ ರೆಫರಿಯ ವರ್ತನೆಯ ವಿರುದ್ಧ ಮ್ಯಾನೇಜರ್ ಚೀಮಾ ಅಧಿಕೃತ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಪಂದ್ಯದ ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ, ಈ ಗೆಲುವು ‘ದೇಶಕ್ಕೆ ಸಲ್ಲಿಸಿದ ದೊಡ್ಡ ಉಡುಗೊರೆ’ ಎಂದಿದ್ದರು. ಈ ಮೂಲಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೆವೆ. ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೆವೆ ಮತ್ತು ಇಂದಿನ ಗೆಲುವನ್ನು ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಬಯಸುತ್ತೆವೆ ಎಂದಿದ್ದರು.
ಏಪ್ರಿಲ್‌ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತೀಯ ಸೇನೆ, ಪಾಕ್‌ನಲ್ಲಿರುವ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಪಾಕಿಸ್ತಾನ ಸಹ ಪ್ರತಿದಾಳಿ ನಡೆಸಿತ್ತು. ಈ ದಾಳಿಯನ್ನು ಭಾರತ ಯಶಸ್ವಿಯಾಗಿ ತಡೆದಿತ್ತು. ಇದಾದ ಬಳಿಕ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿರುವುದು ಇದೆ ಮೊದಲ ಪಂದ್ಯವಾಗಿತ್ತು.
ಪಾಕ್ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ
ಪಂದ್ಯದ ಆರಂಭದಲ್ಲಿ, ಭಾರತದ ಸ್ಪಿನ್ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು ಮತ್ತು ಪಾಕಿಸ್ತಾನ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಹೋರಾಡಿತು ಮತ್ತು ಕೇವಲ 127-9 ರನ್ ಗಳಿಸಲು ಸಾಧ್ಯವಾಯಿತು. ಪಾಕಿಸ್ತಾನದ ಕೆಟ್ಟ ಸ್ಥಿತಿಯಲ್ಲಿ, ಶಾಹೀನ್ ಅಫ್ರಿದಿ ಕೊನೆಯಲ್ಲಿ ಬಂದು 16 ಎಸೆತಗಳಲ್ಲಿ ಅಜೇಯ 33 ರನ್ ಗಳಿಸಿದರು. ಭಾರತದ ಅತ್ಯುತ್ತಮ ಬೌಲರ್ ಕುಲ್ದೀಪ್ ಯಾದವ್, ಅವರು 3 ವಿಕೆಟ್ ಪಡೆದು ಕೇವಲ 19 ರನ್ ನೀಡಿದರು. ಅದೆ ಸಮಯದಲ್ಲಿ, ಅಕ್ಷರ್ ಪಟೇಲ್ ಕೂಡ 2 ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ ಅವರ ವೇಗದ ಬೌಲಿಂಗ್ ಕೂಡ ಉತ್ತಮ ಬೆಂಬಲ ನೀಡಿತು.
ತಂಡಕ್ಕೆ ತಿಲಕ್ ವರ್ಮಾ 31 ರನ್ ಕೊಡುಗೆ ನೀಡಿದರು. ಅಭಿಷೇಕ್ ಶರ್ಮಾ (31 ರನ್, 13 ಎಸೆತ) ಸ್ಫೋಟಕ ಬ್ಯಾಟಿಂಗ್ ಮತ್ತು ಕ್ಯಾಪ್ಟನ್ ಸೂರ್ಯ (47 ರನ್, 37 ಎಸೆತ) ಬಲದಿಂದ ಭಾರತ 7 ವಿಕೆಟ್‌ಗಳಿಂದ ಜಯಗಳಿಸಿತು.