ಚಿತ್ತಾಪುರ: ಸೋಲು ಗೆಲುವಿಗಿಂತ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ತಾಲೂಕ ಧೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ ಹೇಳಿದರು.
ಸಮೀಪದ ರಾವೂರ ಗ್ರಾಮದ ಸಚ್ಚಿದಾನಂದ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿಗೆ ಮಕ್ಕಳಲ್ಲಿ ಕ್ರೀಡಾ ಮನೋಭಾವ ಕಡಿಮೆಯಾಗುತ್ತಿದೆ. ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗುತ್ತಿದ್ದಾರೆ. ಪಾಠಗಳ ಜೊತೆಗೆ ಆಟಗಳು ಮಕ್ಕಳ ವ್ಯಕ್ತಿತ್ವ ವಿಕಾಸಗೊಳಿಸುತ್ತವೆ ಎಂದರು.
ಪದವಿಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯಿಂದ ಹೆಚ್ಚಿನ ಮಕ್ಕಳು ಕ್ರೀಡಾ ಚಟುವಟಿಕೆಗಳಿಂದ ವಂಚಿತರಾಗುತ್ತಿರುವುದು ವಿಶಾದನೀಯ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಸಂಸ್ಥೆಯ ಅಧ್ಯಕ್ಷ ಸಿದ್ದಲಿಂಗ ಮಹಾಸ್ವಾಮಿಗಳು ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು, ಗ್ರೇಡ್ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಭೋಜನಗೌಡ ಪಾಟೀಲ್ ಕ್ರೀಡಾಜ್ಯೋತಿ ಸ್ವೀಕರಿಸಿದರು.
ವೇದಿಕೆಯ ಮೇಲೆ ಗ್ರಾ.ಪಂ ಅಧ್ಯಕ್ಷೆ ಸುಮಿತ್ರಾ ತುಮಕೂರ, ಸಂಸ್ಥೆ ಉಪಾಧ್ಯಕ್ಷ ಚೆನ್ನಣ್ಣ ಬಾಳಿ, ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ, ಸಹಕಾರ್ಯದರ್ಶಿ ಈಶ್ವರ ಬಾಳಿ, ಸದಸ್ಯರಾದ ಅಣ್ಣಾರಾವ ಬಾಳಿ, ಸಿದ್ದಲಿಂಗ ಜ್ಯೋತಿ, ಚೆನ್ನಬಸಪ್ಪ ಕೊಲ್ಲುರ, ಹಣಮಂತರಾಯ ಬಿರಾದಾರ, ವೀರಭದ್ರಪ್ಪ ಗುರುಮಿಠಕಲ್, ದೇವಿoದ್ರಪ್ಪ ದೊರೆ, ವೆಂಕಟಪ್ಪ, ಮಣಿಸಿಂಗ್ ಚವ್ಹಾಣ, ಪತ್ರಕರ್ತ ಮಡಿವಾಳಪ್ಪ ಹೇರೂರ್, ಹರೀಶ್ಚಂದ್ರ ಕರಣಿಕ್ ಇದ್ದರು.
ಕು. ಸರಿತಾ ಕ್ರೀಡಾ ಪ್ರತಿಜ್ಞಾ ವಿಧಿ ಭೋದಿಸಿದಳು.
ಸಿದ್ದಲಿಂಗ ಬಾಳಿ ನಿರೂಪಿಸಿದರು, ಅನುಸೂಯ ಹೂಗಾರ ಪ್ರಾರ್ಥಿಸಿದರು, ಪ್ರಾಚಾರ್ಯ ಕೆ.ಐ ಬಡಿಗೇರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.