8 ಕೋಟಿ ಮೌಲ್ಯದ ಐಷಾರಾಮಿ ಹಡಗು: ಚೊಚ್ಚಲ ಪ್ರಯಾಣ ಆರಂಭಿಸಿದ ಕೆಲವೇ ನಿಮಿಷದಲ್ಲಿ ಮುಳುಗಡೆ

ಸುದ್ದಿ ಸಂಗ್ರಹ

ಟರ್ಕಿ: ಚೊಚ್ಚಲ ಪ್ರಯಾಣ ಆರಂಭಿಸಿದ ಕೆಲವೇ ಕ್ಷಣದಲ್ಲಿ 1 ಮಿಲಿಯನ್ ಡಾಲರ್ ಅಂದರೆ ಸುಮಾರು 8 ಕೋಟಿಗೂ ಅಧಿಕ ಮೌಲ್ಯದ ಐಷಾರಾಮಿ ವಿಹಾರಿ ಹಡಗೊಂದು ಮುಳುಗಿದ ಆಘಾತಕಾರಿ ಘಟನೆ ಟರ್ಕಿಯಲ್ಲಿ ನಡೆದಿದೆ.

ಡೋಲ್ಸ್ ವೆಂಟೊ ಹೆಸರಿನ ಈ ವಿಹಾರಿ ನೌಕೆಯು ಸರಿಸುಮಾರು 85 ಅಡಿ ಉದ್ದವಿತ್ತು.

ಮಂಗಳವಾರ ಉತ್ತರ ಟರ್ಕಿಯ ಎರೆಗ್ಲಿ ಜಿಲ್ಲೆಯ ಜೊಂಗುಲ್ಡಕ್ ಕರಾವಳಿಯಲ್ಲಿ ಚೊಚ್ಚಲ ಪ್ರಯಾಣ ಆರಂಭಿಸಿದ 15 ನಿಮಿಷದಲ್ಲೇ ಮುಳುಗಡೆಯಾಗಿದೆ. ಹಡಗಿನಲ್ಲಿದ್ದ ಹಡಗಿನ ಮಾಲೀಕ ಹಡಗು ಮುಳುಗುತ್ತಿದ್ದಂತೆ ನದಿಗೆ ಹಾರಿ ದಡ ಸೇರಲು ಈಜುತ್ತಿರುವ ವೀಡಿಯೊ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

$940,000 ಮೊತ್ತದ ಅಂದರೆ ಸುಮಾರಿ 8 ಕೋಟಿ ಮೊತ್ತದ ಡೋಲ್ಸ್ ವೆಂಟೊ ಹಡಗು
ಸೂಪರ್‌ಯಾಚ್ಟ್ ಟೈಮ್ಸ್ ವರದಿಯ ಪ್ರಕಾರ, ಈ ಹಡಗು ಮೆಡ್ ಯಿಲ್ಮಾಜ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣ ಆಗಿತ್ತು. ಆದರೆ ವಿಹಾರ ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಹಡಗು ಮುಳುಗಲು ಆರಂಭಿಸಿದ್ದರಿಂದ ಹಡಗಿನಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಭಯಗೊಂಡರು. ಕೂಡಲೇ ಅವರೆಲ್ಲರು ನೀರಿಗೆ ಜಿಗಿದಿದ್ದು, ಹಡಗಿನ ಮಾಲೀಕ ಅವರೊಂದಿಗೆ ಸೇರಿಕೊಂಡರು. ಈ ಹಡಗಿನ ಬೆಲೆ ಸುಮಾರು $940,000 ಎಂದು ವರದಿಯಾಗಿದೆ.

ಜೊಂಗುಲ್ಡಕ್ ಕರಾವಳಿ ನೀರಿನಲ್ಲಿ ಹಡಗು ನಿಧಾನವಾಗಿ ಮುಳುಗುತ್ತಿದ್ದಂತೆ, ಹಡಗಿನ ಮಾಲೀಕ ಮತ್ತು ಇತರರು ಯಾವುದೆ ಹಾನಿಯಾಗದೆ ಈಜುತ್ತಾ ದಡ ಸೇರಿದ್ದಾರೆ. ಘಟನೆಗೆ ನಿಖರವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ. ಡೋಲ್ಸ್ ವೆಂಟೊದ ತಾಂತ್ರಿಕ ತಪಾಸಣೆ ಶೀಘ್ರದಲ್ಲೇ ನಡೆಸಲಾಗುವುದು ಎಂದು ಹಡಗುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.‌

ಹಡಗು ಮುಳುಗುತ್ತಿರುವ ದೃಶ್ಯ ವೈರಲ್: 8 ಕೋಟಿ ರೂ ನೀರಲ್ಲಿ ಹೋಮ
ಈ ಐಷಾರಾಮಿ ಡೋಲ್ಸ್ ವೆಂಟೊ ಹಡಗು ಮುಳುಗುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಕೆಲವರು ಈ ವಿಹಾರಿ ನೌಕೆ ಸಮತೋಲನ ಹೊಂದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆ ದೋಣಿಯಲ್ಲಿ ಕೆಲವು ಕಡಿಮೆ ದರದ ವಸ್ತುಗಳಿಂದ ಮಾಡಿದ್ದರಿಂದ ಮುಳುಗಡೆಯಾಗಿದೆ ಎಂದು ವರದಿಯಾಗಿದೆ. ಅಷ್ಟೊಂದು ದೊಡ್ಡ ಗಾತ್ರದ ದೋಣಿಗೆ ಕೇವಲ $1 ಮಿಲಿಯನ್ ಡಾಲರ್‌ ವೆಚ್ಚವಾಗಿದ್ದರೆ, ಅದು ಏಕೆ ಮುಳುಗಿತು ಎಂಬುದನ್ನು ವಿವರಿಸುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಹಡಗು ಮಾಲೀಕನ 8 ಕೋಟಿ ಹಣ ಈಗ ನೀರಲ್ಲಿ ಹೋಮ ಮಾಡಿದಂತಾಗಿದೆ.

Leave a Reply

Your email address will not be published. Required fields are marked *