ಧಾರವಾಡ: ಕರ್ತವ್ಯದಿಂದ ನಿವೃತ್ತಿಯಾದ ದಿನವೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ)ಯ ಉತ್ತರ ವಲಯ ಮುಖ್ಯ ಇಂಜಿನಿಯರ್ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ ಘಟನೆ ಶನಿವಾರ ನಡೆದಿದೆ.
ಮುಖ್ಯ ಅಭಿಯಂತರ ಎಚ್ ಸುರೇಶ ಅವರ ಕಚೇರಿ, ಕೆಸಿಡಿ ಗಣಪತಿ ದೇವಸ್ಥಾನದ ಹಿಂಭಾಗದಲ್ಲಿರುವ ಸರಕಾರಿ ನಿವಾಸದ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ತಂಡಗಳು ದಾಳಿ ಮಾಡಿದ್ದು, ಕೋಟ್ಯಾಂತರ ಮೌಲ್ಯದ ಸ್ಥಿರಾಸ್ತಿ ಕಾಗದ ಪತ್ರ, ಚರಾಸ್ತಿ ವಸ್ತುಗಳು ವಶಕ್ಕೆ ಪಡೆಯಲಾಗಿದೆ.
ಕರ್ತವ್ಯದಿಂದ ನಿವೃತ್ತಿ ಹಿನ್ನೆಲೆಯಲ್ಲಿ ನಿವಾಸದಲ್ಲಿ ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳಲಾಗಿತ್ತಲ್ಲದೆ ಇಲಾಖೆ ಸಿಬ್ಬಂದಿಗಳಿಂದ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಇದೆ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶಾಕ್ ನೀಡಿದ್ದರಿಂದ ಈ ಎಲ್ಲಾ ಕಾರ್ಯಕ್ರಮಗಳು ರದ್ದಾದವು.
ಮನೆಯಲ್ಲಿ ಸಿಕ್ಕಿರುವುದೇನು ?
ಇದಾದ ಬಳಿಕ ನಿವಾಸ ಹಾಗೂ ಕಚೇರಿ ಸೇರಿದಂತೆ ವಿವಿಧ ಕಡೆ ನಡೆಸಿದ ದಾಳಿಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಆಸ್ತಿ ಕಾಗದ ಪತ್ರಗಳ ಪರಿಶೀಲಿಸಲಾಗಿದೆ, ಈ ವೇಳೆ ಮನೆಯಲ್ಲಿ 76,600 ರೂ. ನಗದು, 21.58 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2,39,958 ರೂ. ಮೌಲ್ಯದ ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ, ಇದಲ್ಲದೆ 13.44 ಲಕ್ಷ ರೂ. ಮೌಲ್ಯದ ಎರಡು ಫ್ಲಾಟ್, 50 ಲಕ್ಷ ರೂ. ಮೌಲ್ಯದ ಆರು ವಾಣಿಜ್ಯ ಮಳಿಗೆಗಳ ಕಾಗದ ಪತ್ರ ದೊರೆತಿದೆ, ಇದರೊಂದಿಗೆ 2.60 ಕೋಟಿ ರೂ. ಮೌಲ್ಯದ ಒಂದು ವಾಸದ ಮನೆ ಇರುವುದು ಗೊತ್ತಾಗಿದೆ.
ಫಾರ್ಮ್ ಹೌಸ್, 35.36 ಲಕ್ಷ ಮೌಲ್ಯದ 11 ಎಕರೆ ಕೃಷಿ ಜಮೀನು, 1.65 ಕೋಟಿ ಎಫ್‌ಡಿ ಪತ್ರಗಳು ಸಿಕ್ಕಿವೆ. ಇದಲ್ಲದೆ 26 ಲಕ್ಷ ರೂ. ಮೌಲ್ಯದ ಎರಡು ವಾಹನ, 25 ಲಕ್ಷ ಮೌಲ್ಯದ ಪೀಠೋಪಕರಣಗಳ ವಶಪಡಿಸಿಕೊಂಡಿದೆ, ಒಟ್ಟು 3, 31,47,574 ಮೌಲ್ಯ ಹೊಂದಿದೆ, ಈ ಹಿನ್ನಲೆಯಲ್ಲಿ ಶೇ.153.54 ರಷ್ಟು ಹೆಚ್ಚಿನ ಆಸ್ತಿ ಗಳಿಕೆಯ ಆರೋಪದಡಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.