ಕಲಬುರಗಿ: ಇಂಗ್ಲೀಷ್ ಭಾಷೆ ಕಲಿಯುವದರಿಂದ ಉದ್ಯೋಗಾವಕಾಶಗಳ ಲಭ್ಯತೆ ಹೆಚ್ಚಾಗುವುದರ ಜೊತೆಗೆ ವಿಶ್ವದ ಅನೇಕ ರಾಷ್ಟ್ರಗಳಿಗೆ ಸಂಚರಿಸಬಹುದು ಎಂದು ಇಂಗ್ಲೀಷ್ ಭಾಷಾ ತರಬೇತಿದಾರ ದತ್ತು ಹಡಪದ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ಇಂಗ್ಲೀಷ್ ಭಾಷೆ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂಗ್ಲೀಷ್ ಭಾಷೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೆಯಾದ ಆಯವ್ಯಾಪಕವಾದ ಮಹತ್ವ ಹೊಂದಿದೆ. ವಿಶ್ವದ ಎಲ್ಲೆಡೆ ಇದನ್ನು ಬಳಸಲಾಗುತ್ತದೆ ಎಂದರು.
ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ವಿಶ್ವವಿಖ್ಯಾತ ಆಂಗ್ಲ ಸಾಹಿತಿ ವಿಲಿಯಮ್ ಶೇಕ್ಸಪೀಯರ್ ಅವರ ಸ್ಮರಣಾರ್ಥವಾಗಿ ಪ್ರತಿವರ್ಷ ಏ-23ರಂದು ‘ವಿಶ್ವ ಇಂಗ್ಲೀಷ್ ಭಾಷೆ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ. ಇದನ್ನು ಜಾಗತಿಕ ಮಟ್ಟದಲ್ಲಿ 2010ರಿಂದ ಪ್ರಾರಂಭಿಸಲಾಗಿದೆ. ಇಂಗ್ಲೀಷ್ ಭಾಷೆಯು ಬ್ರಿಟಿಷರಿಂದ ನಮ್ಮ ದೇಶದಲ್ಲಿ ವ್ಯಾಪಕವಾಗಿ ಪ್ರಸಾರ ಪಡೆಯಿತು. ಮಾತೃಭಾಷೆಯಾದ ಕನ್ನಡ ನಮ್ಮ ಉಸಿರಾಗಲಿ. ಜೊತೆಗೆ ಇಂಗ್ಲೀಷ್ ಭಾಷೆ ಕೂಡಾ ಕಲಿಯುವುದ ಅಗತ್ಯವಾಗಿದೆ. ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವಿಷಯವು ಕಠಿಣವೆನಿಸುತ್ತಿದ್ದು, ಇಂಗ್ಲೀಷ್ ಭಾಷಾ ಶಿಕ್ಷಕರು ಹೆಚ್ಚಿನ ಶ್ರಮವಹಿಸಿ ಕಲಿಸಬೇಕಾದ ಅನಿವಾರ್ಯತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಡಾ.ರಾಜಶೇಖರ ಪಾಟೀಲ್, ಅಸ್ಲಾಂ ಶೇಖ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.