ಕೊಪ್ಪಳ: ಕನ್ನಡದಲ್ಲಿ ಶುಭವಾಗಲಿ ಎಂದು ಬರೆಯಲು ತಡಕಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಕನ್ನಡ ಬರೆಯಲು ಬರೊಲ್ಲ ಎಂಬ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲ್ ಆದ ಬಗ್ಗೆ ಮಾತಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಸುಳೇಕಲ್‌ನಲ್ಲಿ ಮಾತನಾಡಿರುವ ಅವರು, ನಾನು ಬಿಎಸ್ಸಿ ಪದವೀಧರ. ಕನ್ನಡ ಬರೆಯಲು ಬರದೆ ಇರುವಷ್ಟು ದಡ್ಡ ನಾನಲ್ಲ. ಪೂರ್ತಿ ಬರೆಯುವವರೆಗೂ ಕಾಯುವ ತಾಳ್ಮೆ ಇಲ್ಲದವರು ವಿಡಿಯೋ ಹರಿಬಿಟ್ಟಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಕೆಲ ದಿನಗಳ ಹಿಂದೆ ಕೊಪ್ಪಳ ಜಿಲ್ಲೆಯ ಕಾರಟಗಿ ಜೆಪಿ ನಗರದ ಅಂಗವಾಡಿಗೆ ಭೇಟಿ ನೀಡಿದ್ದ ಸಚಿವರು ಕನ್ನಡದಲ್ಲಿ ಶುಭವಾಗಲಿ ಎಂದು ಬರೆಯಲು ಪರದಾಡಿದ್ದರು. ಬಳಿಕ ಬೆಂಬಲಿಗರ ಸಹಾಯದೊಂದಿಗೆ ಸರಿಯಾಗಿ ಬರೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
ನಾನು ಬೇರೆ ಏನೋ ಬರೆಯಲು ಮುಂದಾಗಿದ್ದೆ. ಆದರೆ ಅಲ್ಲಿದ್ದವರು ಶುಭವಾಗಲಿ ಅಂತ ಬರೆಯಲು ಹೇಳಿದರು. ಆಗ ಭ ಅಕ್ಷರದಲ್ಲಿ ಸ್ವಲ್ಪ ತಪ್ಪಾಗಿತ್ತು. ಆದರೆ ಅಕ್ಷರ ಬರೆಯಲಾರದ ಸ್ಥಿತಿಯಲ್ಲಿ ನಾನಿಲ್ಲ. ನನ್ನ ಬಗ್ಗೆ ಮಾತನಾಡುವವರು ನನ್ನ ತಾಳ್ಮೆ ಪರೀಕ್ಷೆ ಮಾಡಬೇಡಿ. ಕಳೆದ ಹನ್ನೆರಡು ವರ್ಷಗಳಿಂದ ರಾಜಕೀಯದಲ್ಲಿದ್ದೆನೆ. ಎಂದಾದರೂ ಕನ್ನಡ ತಪ್ಪಾಗಿ ಮಾತನಾಡಿದ್ದೆನಾ ? ಯಾವುದಾದರೂ ಹೆಸರು ತಪ್ಪಾಗಿ ಹೇಳಿದ್ದೆನಾ ? ಸ್ಪಷ್ಟವಾಗಿ ಕನ್ನಡದಲ್ಲಿಯೇ ಭಾಷಣ ಮಾಡುತ್ನೆ. ನನ್ನ ಸಾಮರ್ಥ್ಯವನ್ನು ನೋಡಿ ಮಾತನಾಡಿ ಎಂದರು.
ಕಳೆದ ಎರಡು ವರ್ಷ ಇಲಾಖೆ ಹೇಗೆ ನಿಭಾಯಿಸಿದ್ದೆನೆ ಅಂತ ನೋಡಿ. ನನ್ನ ಕಾರ್ಯನಿರ್ವಹಣೆ ಬಗ್ಗೆ ಸಾಹಿತಿಗಳೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಬಗ್ಗೆ ಟೀಕೆ ಮಾಡಲು ಇದುವರೆಗೆ ಏನೂ ಸಿಕ್ಕಿಲ್ಲ ಅಂತ ಅಸಹಾಯಕರಾಗಬೇಡಿ ಎಂದು ತಂಗಡಗಿ ಹೇಳಿದರು.