ಅಮ್ಮ ಹೆಸರಿನಲ್ಲಿ ನೀಡುವ ಪ್ರಶಸ್ತಿ ರಾಜ್ಯಕ್ಕೆ ಮಾದರಿ

ರಾಜ್ಯ ವಿಶೇಷ ಕಾರ್ಯಕ್ರಮ

ಸೇಡಂ: ಜಗತ್ತಿನಲ್ಲಿ ಎರಡು ಸುರಕ್ಷಿತ ಸ್ಥಳ ಅಪ್ಪನ ಹೆಗಲು, ಅಮ್ಮನ ಮಡಿಲು ಹೀಗಾಗಿ ತಾಯಿ, ತಂದೆಯರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಜಗತ್ತಿನ ಎಲ್ಲಾ ಪ್ರಶಸ್ತಿಗೂ ಮಿಗಿಲಾದದ್ದು ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಅಭಿಪ್ರಾಯಪಟ್ಟರು.

ಪಟ್ಟಣದ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನವು ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ 24ನೇ ವರ್ಷದ ಅಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಮಾತನಾಡಿದ ಅವರು, ದೇಶದ ಉದ್ದಗಲಕ್ಕೂ ನೀಡುವ ಪ್ರಶಸ್ತಿಗಳ ಆಯ್ಕೆಗಳೆ ಪ್ರಶ್ನೆ ಮಾಡುವ ಇಂದಿನ ದಿನಗಳಲ್ಲಿ, ಅಳೆದು ತೂಗಿ ನೀಡುತ್ತಿರುವ ಅಮ್ಮ ಪ್ರಶಸ್ತಿ ಶ್ರೇಷ್ಠತೆಯನ್ನೊಳಗೊಂಡಿದೆ. ಇಂತಹ ಮಾನದಂಡಗಳು ಅನುಸರಿಸುವದರಿಂದ ನಿಜವಾದ ಸಾಧಕರಿಗೆ ಗೌರವ ಸಿಗಲು ಸಾಧ್ಯ. ಮುಂಬರುವ ದಿನಗಳಲ್ಲಿ ನಿಷ್ಠುರವಾದ ಸಾಹಿತ್ಯ ಮತ್ತು ಸಾಹಿತಿಗಳಿಗೆ ನಾಡಿನ ವಿವಿಧ ಸಂಘ ಸಂಸ್ಥೆಗಳು ಕೊಡಮಾಡುವ ಇಂತಹ ಪ್ರಶಸ್ತಿಗಳು ಲಭಿಸಬೇಕಾಗಿದೆ. ಇಡೀ ರಾಜ್ಯದ ವಿವಿಧ ಭಾಗಗಳಿಂದ ಸಾಹಿತಿಗಳನ್ನು ಗುರುತಿಸಿ ತಾಯಿ ಮಮತೆಯ ಗೌರವ ನೀಡುತ್ತಿರುವದು ತಾಯಿ ನೀಡಿದ ಪ್ರೀತಿಯಂತೆ ಕಾಣುತ್ತದೆ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ರಾಜ್ಯ ತೋಟಗಾರಿಕೆ ಮಹಾಮಂಡಳಿಯ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ ಊಡಗಿ, ಮುನ್ನೂರ ಅವರು ನಾಡಿನ ನಾನಾ ಭಾಗದ ಸಾಹಿತಿಗಳನ್ನು ಸೇಡಂ ನೆಲಕ್ಕೆ ಕರೆಸಿ, ಅವರಿಗೆ ಅಮ್ಮನ ಪ್ರಶಸ್ತಿ ಕೊಡುವ ಮೂಲಕ ಮಾತೃತ್ವದ ಮಮತೆಯನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ತಾಲೂಕಿಗೆ ಹೆಮ್ಮೆಯ ವಿಷಯ. ಇಂತಹ ಅರ್ಥಪೂರ್ಣ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಮಹಿಪಾಲರೆಡ್ಡಿಯವರ ಕಾರ್ಯ ಶ್ಲಾಘನೀಯ ಎಂದರು.

ಸಾನಿಧ್ಯವಹಿಸಿದ್ದ ನಾಲವಾರ ಶ್ರೀ ಕೋರಿಸಿದ್ದೇಶ್ವರ ಮಠದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು, ಮುಖ್ಯಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಬಸವರಾಜ ಸಾದರ ಮಾತನಾಡಿದರು. ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮುನ್ನೂರು ಇದ್ದರು.

ಕೋವಿಡ್ ಸಮಯದಲ್ಲಿ ಪರ್ತಕರ್ತರಾದ ನಮ್ಮನ್ನು ಮನೆಯಲ್ಲಿಯೇ ಇರೀ ಅಂತ ಯಾರೂ ಹೇಳಲಿಲ್ಲ, ಸರ್ಕಾರ, ವೈದ್ಯರು ನೀಡುವ ಸಲಹೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಕೆಲಸ ಪತ್ರಕರ್ತರು ಮಾಡಿದ್ದಾರೆ. ಅನೇಕ ಪತ್ರಕರ್ತರು ಆ ಸಂದರ್ಭದಲ್ಲಿ ಜೀವ ಕಳೆದುಕೊಂಡರು. ಆ ದಿನಗಳಲ್ಲಿ ನಾವು ಕಂಡ ಕೋವಿಡ್ ಕಥೆಗಳು ಎಂಬ ಕೃತಿ ಹೊರತರುವ ಕೆಲಸ ಮಾಡಿದ್ದೇನೆ. ಆ ಕೃತಿಗೆ ಅಮ್ಮ ಪ್ರಶಸ್ತಿ ಲಭಿಸಿದ್ದು ಸಾರ್ಥಕ ಭಾವ ಮೂಡಿಸಿದೆ.

  • ಶಿವಾನಂದ ತಗಡೂರು, ರಾಜ್ಯಾಧ್ಯಕ್ಷರು ಪತ್ರಕರ್ತರ ಸಂಘ ಬೆಂಗಳೂರು

ಪ್ರಶಸ್ತಿ ಪಡೆದವರು

ವಿದ್ಯಾರಶ್ಮಿ ಪೆಲತ್ತಡ್ಕ, ಪ್ರಭಾವತಿ ದೇಸಾಯಿ, ವೀರೇಂದ್ರ ರಾವಿಹಾಳ್, ಪೂರ್ಣಿಮಾ ಮಾಳಗಿಮನಿ, ದ್ವಾರನಕುಂಟೆ ಪಾತಣ್ಣ, ಗುರುಪ್ರಸಾದ ಕಂಟಲಗೆರೆ, ಡಾ.ಪರ್ವಿನ ಸುಲ್ತಾನಾ, ಡಾ.ಪ್ರಕಾಶ ಭಟ್, ಡಾ.ಎಚ್.ಎಸ್.ಸತ್ಯನಾರಾಯಣ, ಮಂಜುನಾಥ ಚಾಂದ್.

ಶಿವಾನಂದ ತಗಡೂರು (ಕೋವಿಡ್ ಕಥೆಗಳು) ಅವರ ಅಮ್ಮ ಮಾಧ್ಯಮ ಕೃತಿಗೆ ವಿಶೇಷ ಪುರಸ್ಕಾರ ನೀಡಲಾಯಿತು.

ಇದೇ ಸಂದರ್ಭದಲ್ಲಿ ನಾಗಪ್ಪ ಮಾಸ್ತರ್ ಮುನ್ನೂರ ಅವರ ಸ್ಮರಣಾರ್ಥ ಇಬ್ಬರು ಬಡ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.

ಮೇಘಾ ಪ್ರಾರ್ಥಿಸಿದರು, ಪ್ರಭಾಕರ ಜೋಶಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು, ಮಹಿಪಾಲರೆಡ್ಡಿ ಮುನ್ನೂರ್ ನಿರೂಪಣೆ ಮಾಡಿದರು, ಮಹಾಂತೇಶ ನವಲಕಲ್ ಪ್ರಶಸ್ತಿ ಆಯ್ಕೆಯ ಬಗೆ ವಿವರಿಸಿದರು.

Leave a Reply

Your email address will not be published. Required fields are marked *